ಬೆಳಗಾವಿ : ರಾಜ್ಯಾದ್ಯಂತ ಈವರೆಗೆ 30 ಸಾವಿರ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಯಾರಲ್ಲೂ ಅಡ್ಡಪರಿಣಾಮ ಕಾಣಿಸಿಲ್ಲ. ಆದರೆ, ಕೋವಿಡ್ ಲಸಿಕೆ ವಿತರಣೆ ವಿಚಾರದಲ್ಲಿ ನಮ್ಮ ಗುರಿ ತಲುಪಲಾಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ರಾಜ್ಯದಲ್ಲಿ 80 ಸಾವಿರ ಲಸಿಕೆ ವಿತರಣೆ ಗುರಿ ಹೊಂದಿದ್ದೇವೆ. ಎಷ್ಟು ಗುರಿ ತಲುಪಿದ್ದೇವೆ ಎಂಬ ಬಗ್ಗೆ ಸಂಜೆ ವೇಳೆಗೆ ಜಿಲ್ಲಾವಾರು ಮಾಹಿತಿ ಬಿಡುಗಡೆ ಮಾಡುತ್ತೇವೆ ಎಂದರು.
ವ್ಯಾಕ್ಸಿನ್ ಪಡೆದು ಸಂಡೂರಿನ ವೈದ್ಯಕೀಯ ಸಿಬ್ಬಂದಿ ಹೃದಯಾಘಾತದಿಂದ ಮೃತ ಪಟ್ಟಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವ್ಯಾಕ್ಸಿನ್ ಪಡೆದಿದ್ದಕ್ಕೆ ನಮ್ಮ ಸಿಬ್ಬಂದಿ ಮೃತನಾಗಿಲ್ಲ, ಈ ರೀತಿ ಹೇಳಲು ಹೋಗಬೇಡಿ. ಆತ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ಪ್ರಾಥಮಿಕ ಮಾಹಿತಿ ಇದೆ.
ಮೃತ ವ್ಯಕ್ತಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಇವತ್ತು ಕಚೇರಿಗೆ ಬಂದಾಗ ತೀವ್ರ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮೊದಲೇ ಅವರು ಮೃತಪಟ್ಟಿದ್ದಾರೆ. ಅವರು 2 ದಿನಗಳ ಹಿಂದೆ ವ್ಯಾಕ್ಸಿನ್ ಪಡೆದಿದ್ದರೂ ಯಾವುದೇ ಅಡ್ಡಪರಿಣಾಮ ಕಾಣಿಸಿರಲಿಲ್ಲ. ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಮೇಲೆ ನಿಜಾಂಶ ತಿಳಿಯಲಿದೆ ಎಂದರು.
ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮ ಮರಾಠಮಯವಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಸರ್ಕಾರಿ ಕಾರ್ಯಕ್ರಮವಲ್ಲ. ಅದು ಶಶಿಕಲಾ ಜೊಲ್ಲೆ ಅವರ ಖಾಸಗಿ ಶಾಲೆಯ ಕಾರ್ಯಕ್ರಮವಾಗಿತ್ತು. ಅಲ್ಲಿ ಕೋವಿಡ್ ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದ ಅವರು, ವಾಸ್ತವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡುವಂತೆ ಮಾಧ್ಯಮಗಳ ವಿರುದ್ಧ ಗರಂ ಆದರು.
ಓದಿ: ಉದ್ಧವ್ ಠಾಕ್ರೆ ಹೇಳಿಕೆ ಭಾರತೀಯ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಬಿ.ಎಸ್.ಯಡಿಯೂರಪ್ಪ