ಅಥಣಿ: ನನ್ನ ರಾಜಕೀಯ ಜೀವನದಲ್ಲಿ ಈಗ ಸಿಗುತ್ತಿರುವಷ್ಟು ಸ್ಪಂದನೆಯನ್ನು ನಾನು ಯಾವತ್ತೂ ನೋಡಿರಲಿಲ್ಲ. ಒಂದು ಸಲ ನಮ್ಮ ಮಾಲೀಕರಾದ ಮತದಾರರು ತೀರ್ಮಾನ ಮಾಡಿದರೆ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಮೂರೂವರೆ ವರ್ಷ ಯಡಿಯೂರಪ್ಪ ಸರ್ಕಾರ ಇರಬೇಕು ಅಂತಾ ಜನ ಬಯಸಿದ್ದಾರೆ. ಹೀಗಾಗಿ ನೂರಕ್ಕೆ ನೂರರಷ್ಟು ಹದಿನೈದು ಕ್ಷೇತ್ರಗಳಲ್ಲಿ ನಾವೇ ಗೆಲ್ತೀವಿ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.
ನಾಳೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಅಥಣಿ ಪಟ್ಟಣದಲ್ಲಿ ಎರಡನೇ ಸುತ್ತಿನ ಬೃಹತ್ ಸಾರ್ವಜನಿಕ ಪ್ರಚಾರಕ್ಕೆ ಆಗಮಿಸಿರುವ ಬಿಎಸ್‌ವೈ, ಡಿಸಿಎಂ ಲಕ್ಷ್ಮಣ ಸವದಿ ನಿವಾಸಕ್ಕೆ ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು.
ಉಪಚುನಾವಣೆಯಲ್ಲಿ ಶೇ 70-75ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕಿದೆ ಎಂದು ಎಲ್ಲಾ ಕಡೆ ಹೇಳಿದ್ದೇನೆ. ಈ ಬಾರಿ ವಿಶೇಷವೆಂಬಂತೆ ಪರಿಶಿಷ್ಟ ಜಾತಿ, ಪಂಗಡದವರಂತೆಯೇ ಅಲ್ಪಸಂಖ್ಯಾತರಾದ ಮುಸ್ಲೀಮರು ಮತ್ತು ಕ್ರಿಶ್ಚಿಯನ್ನರು ಕೂಡ ನಮ್ಮ ಜೊತೆ ಕೈ ಜೋಡಿಸಲಿದ್ದಾರೆ ಎಂದರು.
'ಸಿದ್ದರಾಮಯ್ಯ ಹತಾಶರಾಗಿದ್ದಾರೆ'
ಡಿಸೆಂಬರ್ 9ರ ನಂತ್ರ ಬಿಜೆಪಿ ಸರ್ಕಾರ ಬೀಳಲಿದೆ ಎಂಬ ಸಿದ್ದರಾಮಯ್ಯರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ಸಿದ್ದರಾಮಯ್ಯರ ಜೊತೆ ಸ್ವತಃ ಖರ್ಗೆ ಸೇರಿದಂತೆ ಯಾರೂ ಪ್ರಚಾರಕ್ಕೆ ಬರುತ್ತಿಲ್ಲ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಒಗ್ಗಟ್ಟು ಛಿದ್ರವಾಗಿದೆ. ಡಿಸೆಂಬರ್ 9 ನಂತರದ ಫಲಿತಾಂಶದಲ್ಲಿ ಅವರ ಪ್ರತಿಪಕ್ಷದ ನಾಯಕನ ಸ್ಥಾನವೇ ಉಳಿಯೋದು ಕಷ್ಟ ಎಂದರು.
ಇದೇ ವೇಳೆ ದೇವೇಗೌಡರ ಬಗೆಗಿನ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ, ದೇವೇಗೌಡರು ಹಿರಿಯ ರಾಜಕಾರಣಿಯಾಗಿದ್ದು ಅವರ ಅನುಭವದ ಮೂಲಕ ಮುಂದಾಲೋಚನೆಯಿಂದ ಮಾತನಾಡುತ್ತಾರೆ ಎಂದು ಹೇಳಿದ್ರು
ಕುಮಾರಸ್ವಾಮಿ, ಸಿದ್ದರಾಮಯ್ಯ, ದೇವೇಗೌಡರು ಮಾತನಾಡುವ ಬಗ್ಗೆ ಪ್ರತಿಕ್ರಿಯೆ ಕೊಡಲಾರೆ. ಅವರು ಮಾತನಾಡಲು ಸ್ವತಂತ್ರರು, ನಾವಂತೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ನಾಳೆ ಬೆಳಗ್ಗೆ ಸಿಎಂ 11 ಗಂಟೆಗೆ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬೃಹತ್ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.