ಬೆಳಗಾವಿ: ಹಿಜಾಬ್ ಹೆಸರಲ್ಲಿ ರಾಜಕಾರಣ ಮಾಡುವ ದರ್ದು ಬಿಜೆಪಿಗಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದು ಬಹಳ ದುರದೃಷ್ಟಕರ ಸಂಗತಿ ಎಂದರು.
ಶಾಲಾ - ಕಾಲೇಜುಗಳಿಗೆ ಸಮವಸ್ತ್ರದಲ್ಲಿ ಹೋಗುವುದು ಮೊದಲಿನಿಂದಲೂ ಬಂದ ಪದ್ಧತಿ. ಸಮವಸ್ತ್ರ ಎಂದರೆ ಏನು ಎಂಬುದು ಹೆಸರಲ್ಲೇ ಗೊತ್ತಾಗುತ್ತದೆ. ಶಾಲೆಗಳಲ್ಲಿ ಜಾತಿ ವಿಚಾರ ಬರಬಾರದು. ಶಾಲಾ ಕಾಲೇಜು ಆವರಣಕ್ಕೆ ಹೋದ ಸಂದರ್ಭದಲ್ಲಿ ಹಿಂದೂ - ಮುಸ್ಲಿಂ ಎಂಬ ಭಾವನೆಯಿಲ್ಲದೇ ವಿದ್ಯಾರ್ಥಿಗಳಾಗಿರಬೇಕು ಎಂದರು.
ಚುನಾವಣಾ ವರ್ಷದಲ್ಲಿ ಅಭಿವೃದ್ಧಿ ಕೆಲಸ ಇಲ್ಲದೇ ಬಿಜೆಪಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ, ಕೇಂದ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸ ಆಗುತ್ತಿದೆ ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ. ಕೇಂದ್ರ, ರಾಜ್ಯ ಸರ್ಕಾರದ ಸಾಧನೆ ಆಧಾರ ಮೇಲೆ ಚುನಾವಣೆ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ: ವಿಜಯಪುರ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ವಿಪಕ್ಷ ನಾಯಕರು. ಇದರಲ್ಲಿ ಬಿಜೆಪಿ ಮೂಗು ತೂರಿಸುವ ಪ್ರಶ್ನೆಯೇ ಇಲ್ಲ. ಸಿಎಂ ಬೊಮ್ಮಾಯಿ ಸಹ ಹಿಂದೆಯ ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಮಾನದ ಮೇಲೆ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರವಾಗಲೀ ಅಥವಾ, ಬಿಜೆಪಿ ಆಗಲಿ ರಾಜಕಾರಣ ಮಾಡಲ್ಲ. ಸಮವಸ್ತ್ರ ವಿಚಾರದಲ್ಲಿ ಯಾವತ್ತೂ ಈ ರೀತಿ ಗೊಂದಲ ಇರಲಿಲ್ಲ. ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ದೇಶಾದ್ಯಂತ ಗೊಂದಲ ಸೃಷ್ಟಿಸುವ ಕೆಲಸ ವಿಪಕ್ಷಗಳು ಮಾಡುತ್ತಿವೆ ಎಂದು ದೂರಿದರು.
ಇನ್ನು ವಿದ್ಯಾರ್ಥಿಗಳು ಈ ವಿಚಾರವಾಗಿ ತಲೆ ಕೆಡಿಸಿಕೊಳ್ಳವಾರದು. ಶಾಲಾ ಆವರಣ ಎಂದರೆ ಎಲ್ಲ ಧರ್ಮ, ಸಮುದಾಯದ ಮಕ್ಕಳು ಇರಬೇಕು. ಒಂದೇ ಬೆಂಚ್‌ನಲ್ಲಿ ಕುಳಿತು ಪಾಠ ಕೇಳಬೇಕು ಎಂದರು.
ಕುರಿಮರಿ ಗಿಫ್ಟ್ ಕೊಟ್ಟ ಕುರುಬ ಸಮುದಾಯ: ಬೆಳಗಾವಿಯ ಕುರುಬ ಸಮುದಾಯದಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕುರಿ ಮರಿ ಗಿಫ್ಟ್ ನೀಡಿ ಕಂಬಳಿ ತೊಡಿಸಿ ಸನ್ಮಾನಿಸಿತು.
ರಾಜ್ಯ ಸರ್ಕಾರ 'ಅನುಗ್ರಹ ಯೋಜನೆ' ಮುಂದುವರೆಸಿದ ಹಿನ್ನೆಲೆ ಕುರುಬ ಸಮುದಾಯದಿಂದ ಬಿ.ವೈ.ವಿಜಯೇಂದ್ರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಬೆಳಗಾವಿಯ ಖಾಸಗಿ ಹೋಟೆಲ್ ಆವರಣದಲ್ಲಿ ಕುರುಬ ಸಮುದಾಯದ ಮುಖಂಡರು ವಿಜಯೇಂದ್ರ ಅವರನ್ನು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.
ಮಂತ್ರಿಗಿರಿಗೆ ನಾನು ತಲೆಕೆಡಿಸಿಕೊಳ್ಳಲ್ಲ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಸೇರ್ಪಡೆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ರಾಜ್ಯದ ಉಪಾಧ್ಯಕ್ಷನಾಗಿ ಸಂಘಟನೆ ಕೆಲಸ ಮಾಡುತ್ತಿದ್ದೇನೆ. ಪಕ್ಷ, ಸಿಎಂ, ರಾಜ್ಯಾಧ್ಯಕ್ಷರು ಕುಳಿತು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದರು.
ಬೆಳಗಾವಿ ಬಿಜೆಪಿಯಲ್ಲಿ ಸವದಿ, ಕತ್ತಿ ವರ್ಸಸ್ ಜಾರಕಿಹೊಳಿ ಬ್ರದರ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮದು ದೊಡ್ಡ ರಾಷ್ಟ್ರೀಯ ಪಕ್ಷ. ಕರ್ನಾಟಕದಲ್ಲಿ ನಮ್ಮ ಪಕ್ಷ ಸುಭದ್ರವಾಗಿದೆ. ಸಂಘಟನೆಯಲ್ಲಿಯೂ ಗಟ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ. ಇದನ್ನೆಲ್ಲ ಸರಿದೂಗಿಸುವ ಕೆಲಸವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡುತ್ತಾರೆ ಎಂದರು.
ಸಂಪುಟ ಪುನರ್ ರಚನೆ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಶೀಘ್ರವೇ ಆಗಲಿದೆ. ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕಾರ್ಯಕರ್ತರಿಗೆ ಕೊಟ್ಟಿದ್ದರು. ಬೇರೆ ಕಾರ್ಯಕರ್ತರಿಗೂ ಅವಕಾಶ ಕೊಡಬೇಕೆಂಬ ಸದುದ್ದೇಶ ಸಿಎಂ, ರಾಜ್ಯಾಧ್ಯಕ್ಷರು ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಅದು ಆಗುತ್ತದೆ ಎಂಬ ಭರವಸೆ ನಮ್ಮೆಲ್ಲರಲ್ಲೂ ಇದೆ. ಬೆಳಗಾವಿ ಮೇಯರ್ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಲು ಆಗ್ರಹಗಳಿವೆ. ಈ ಕುರಿತು ಜಿಲ್ಲೆಯ ಮುಖಂಡರು, ಸಚಿವರು ತೀರ್ಮಾನ ಮಾಡುತ್ತಾರೆ ಎಂದು ವಿಜಯೇಂದ್ರ ತಿಳಿಸಿದರು.