ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಲ್ಲ ಹಬ್ಬ, ಉತ್ಸವಗಳನ್ನು ಅದ್ಧೂರಿ ಮತ್ತು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಗುಡಿ ಪಾಡವಾ ನಿಮಿತ್ತ ನಗರದ ವಿವಿಧೆಡೆ ಆಯೋಜಿಸಿದ್ದ ಎಮ್ಮೆಗಳ ಓಟ ನೋಡುಗರನ್ನು ರೋಮಾಂಚನಗೊಳಿಸಿತು. ಎಮ್ಮೆಗಳ ವೈಯ್ಯಾರ, ಶೃಂಗಾರಕ್ಕೆ ಜನ ಮನಸೋತರು.
ಎಮ್ಮೆ ಇಲ್ಲಿನ ಗೌಳಿಗರ ಪಾಲಿನ ನಿಜವಾದ ಲಕ್ಷ್ಮೀ ದೇವಿ. ವರ್ಷಪೂರ್ತಿ ಎಮ್ಮೆಗಳನ್ನು ಚೆನ್ನಾಗಿ ಮೇಯಿಸಿ, ಹಾಲು ಕರೆದು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಶ್ರಮಿಸುವ ಇವರು, ದೀಪಾವಳಿ ಬಂತು ಎಂದರೆ ಸಾಕು ಎಮ್ಮೆಗಳನ್ನು ಶೃಂಗರಿಸಿ, ಹುರಿಗೊಳಿಸಿ ಓಟದಲ್ಲಿ ಎಮ್ಮೆಗಳನ್ನು ಓಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಎಮ್ಮೆಗಳ ಓಟದ ಸಂಭ್ರಮದಲ್ಲಿ ಗೌಳಿಗರು, ಎಮ್ಮೆ ಪ್ರಿಯರು ಮಿಂದೆದ್ದರು.
ಬೆಳಗಾವಿ ಚವಾಟ ಗಲ್ಲಿ, ಕ್ಯಾಂಪ್ ಪ್ರದೇಶ, ಟಿಳಕವಾಡಿಯ ಗೌಳಿ ಗಲ್ಲಿ, ಗೊಂಧಳಿ ಗಲ್ಲಿ, ಗಾಂಧಿ ನಗರ, ವಡಗಾವಿ, ಕೋನವಾಳ ಗಲ್ಲಿ, ಶುಕ್ರವಾರ ಪೇಟೆ ಸೇರಿದಂತೆ ವಿವಿಧೆಡೆ ಇಂದು ಬಲಿಪಾಡ್ಯಮಿಯ ದಿನ ಎಮ್ಮೆಗಳ ಓಟ ಆಯೋಜಿಸಲಾಗಿತ್ತು. ಎಮ್ಮೆಗಳಿಗೆ ಕವಡೆ ಸರ, ಕೋಡುಗಳಿಗೆ ಬಣ್ಣ ಬಳಿದು, ನವಿಲು ಗರಿಯಿಂದ ಶೃಂಗರಿಸಿದ್ದ ಎಮ್ಮೆಗಳು ಎಲ್ಲರ ಗಮನ ಸೆಳೆದವು.
ಬೈಕಿನ ಸೈಲೆನ್ಸರ್ ತೆಗೆದು ಕರ್ಕಶ ಶಬ್ದ ಮಾಡುತ್ತ ಯುವಕರು ವೇಗವಾಗಿ ಬೈಕ್ ಓಡಿಸಿದರೆ ಎಮ್ಮೆಗಳು ಅವರ ಹಿಂದೆ ಓಡಿ ಬರುತ್ತಿದ್ದ ದೃಶ್ಯ ನೋಡುಗರ ಮೈನವಿರೇಳಿಸುವಂತೆ ಮಾಡಿತು. ರಸ್ತೆ ಪಕ್ಕ ನಿಂತಿದ್ದ ಜನರು ಸಿಳ್ಳೆ, ಚಪ್ಪಾಳೆಗಳ ಮೂಲಕ ಎಮ್ಮೆಗಳನ್ನು ಹುರಿದುಂಬಿಸಿದರು. ಇನ್ನು ಕೆಲ ಯುವಕರು ಎಮ್ಮೆಯ ಮುಂದೆ ಕಪ್ಪು ಬಟ್ಟೆ ಹಿಡಿದುಕೊಂಡು ಓಡುತ್ತಿದ್ದರೆ, ಎಮ್ಮೆಗಳು ಮತ್ತಷ್ಟು ಕೋಪಗೊಂಡು ಓಡುತ್ತಿದ್ದವು. ಎಮ್ಮೆಗಳ ರೋಷಾವೇಷದ ಈ ದೃಶ್ಯಗಳನ್ನು ಜನ ಮೊಬೈಲಿನಲ್ಲಿ ಸೆರೆ ಹಿಡಿದು ಸಖತ್ ಎಂಜಾಯ್ ಮಾಡಿದರು.
ಚವಾಟ ಗಲ್ಲಿಯ ಪ್ರಭಾಕರ ಜಾಧವ ಮತ್ತು ಮಹೇಶ ಮೋಹಿತೆ ಈಟಿವಿ ಭಾರತ್ ಜೊತೆಗೆ ಮಾತನಾಡಿ,ನಮ್ಮ ಹಿರಿಯರ ಕಾಲದಿಂದಲೂ ಗುಡಿ ಪಾಡವಾ ದಿವಸ ಎಮ್ಮೆ ಓಡಿಸಿಕೊಂಡು ಬಂದಿದ್ದೇವೆ. ಎಮ್ಮೆಗಳ ಮೇಲೆ ಮಾಲೀಕ ಎಷ್ಟು ಪ್ರೀತಿ ಹೊಂದಿದ್ದಾನೆ ಎಂಬುದು ಇದರಲ್ಲಿ ಗೊತ್ತಾಗುತ್ತದೆ. ಮನುಷ್ಯರು ಎಲ್ಲ ಹಬ್ಬಗಳಲ್ಲೂ ಹೊಸ ಬಟ್ಟೆ ಹಾಕಿಕೊಳ್ಳುತ್ತಾರೆ. ಹಾಗಾಗಿ, ವರ್ಷದಲ್ಲಿ ಒಂದು ದಿನವಾದರೂ ಎಮ್ಮೆಗಳನ್ನು ಶೃಂಗರಿಸಬೇಕೆಂದು, ಒಂದಕ್ಕಿಂತ ಒಂದು ಎಮ್ಮೆಗಳನ್ನು ಅತಿ ಆಕರ್ಷಣೀಯವಾಗಿ ಶೃಂಗರಿಸಲಾಗಿದೆ. ಇದು ನಮಗೆ ಬಹಳಷ್ಟು ಖುಷಿ ಕೊಡುತ್ತದೆ ಎಂದರು.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ದೀಪಾವಳಿ ನಿಮಿತ್ತ ಆಯೋಜಿಸಿದ್ದ ಎಮ್ಮೆಗಳು ಜನರಿಗೆ ಮನರಂಜನೆ ನೀಡಿದ್ದು ಮಾತ್ರ ಸುಳ್ಳಲ್ಲ.
ಇದನ್ನೂ ಓದಿ: ಹಾವೇರಿಯಲ್ಲಿ ಮನಸೆಳೆದ ದನ ಬೆದರಿಸುವ ಸ್ಫರ್ಧೆ: ಹೋರಿಗಳಿಗೆ ಕಟ್ಟಿದ ಕೊಬ್ಬರಿ ಕಿತ್ತುಕೊಳ್ಳಲು ಪೈಲ್ವಾನರ ಹರಸಾಹಸ