ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮೇಳವಂಕಿ ಗ್ರಾಮದಲ್ಲಿ ಸೇತುವೆ ಕುಸಿತವಾದ ಪರಿಣಾಮ ಗೋಕಾಕ ಲೋಕಾಪುರ ರಸ್ತೆ ಸಂಪರ್ಕ ಕಡಿತವಾಗಿದೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಮೇಳವಂಕಿ ಗ್ರಾಮದ ಹೊರ ವಲಯದ ಹಳ್ಳಕ್ಕೆ ನಿರ್ಮಿಸಲಾಗಿದ್ದ ಸೇತುವೆ ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದ್ದು, ಗೋಕಾಕ ಕೌಜಲಗಿ ಸಂಪರ್ಕಿಸುವ ದಂಡಿನ ಮಾರ್ಗದಲ್ಲಿರುವ ಸೇತುವೆಯಾಗಿದೆ.
ಇನ್ನು ಸೇತುವೆ ಬೀಳುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಸೇತುವೆ ಕುಸಿತವಾಗಿದ್ದರಿಂದ ಗೋಕಾಕ್ ಲೋಕಾಪುರ ರಸ್ತೆ ಸಂಪರ್ಕ ಸೇರಿದಂತೆ ಕೌಜಲಗಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಸಜ್ಜಿಹಾಳ, ಢವಳೇಶ್ವರ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಆ ಮಾರ್ಗದಲ್ಲಿ ಸಂಚಾರ ಮಾಡುವ ಜನರು 20 ಕಿ.ಮೀ ಸುತ್ತುಹಾಕಿ ಗ್ರಾಮಕ್ಕೆ ತೆರಳುವಂತಾಗಿದೆ.
ಇನ್ನು ಈ ಸೇತುವೆಯನ್ನು ಲೋಕೊಪಯೋಗಿ ಇಲಾಖೆ ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದ್ರೆ, ಸೇತುವೆಯನ್ನು ಕುಸಿತವಾದ ಹಿನ್ನಲೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ತಂಡೊಪತಂಡವಾಗಿ ಆಗಮಿಸುತ್ತಿದ್ದಾರೆ. ಇದರಿಂದ ಏನಾದರೂ ಅನಾಹುತ ಸಂಭವಿಸಿದ್ರೆ ಯಾರು ಹೊಣೆ. ಹೀಗಾಗಿ ಸೇತುವೆ ಕುಸಿತವಾದ ಸ್ಥಳಕ್ಕೆ ಜನರು ತೆರಳದಂತೆ ಸ್ಥಳೀಯ ಪೊಲೀಸರು ಬ್ಯಾರಿಕೇಡ್ ಹಾಕಬೇಕು ಎಂಬುವುದು ಕೆಲ ಸಾರ್ವಜನಿಕರ ಒತ್ತಾಸೆಯಾಗಿದೆ