ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯಲ್ಲಪ್ಪ ಜಿನ್ನಪ್ಪ ಬಹುರೂಪಿ ಎಂಬ 2 ವರ್ಷದ ಬಾಲಕ, ಮನೆ ಮುಂದೆ ಆಟವಾಡುವಾಗ ಅಪರಿಚಿತರು ಕಾರಿನಲ್ಲಿ ಬಂದು ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಫೆ.6ರಂದು ಪ್ರಕರಣ ದಾಖಲಾಗಿತ್ತು. ಕೇಸನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ.
ಪ್ರಶಾಂತ್, ಜೋತಿಬಾ, ಅನಿಲ್, ಜಂಬುಸಾಗರ್ ಹಾಗೂ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಆರೋಪಿಗಳು ಮಗುವನ್ನು ಆಶ್ರಮದಿಂದ ಕಾನೂನಿನ ಪ್ರಕಾರ ದತ್ತು ಪಡೆದು ನಿಮಗೆ ಮಗು ನೀಡಿದ್ದೇವೆ ಎಂದು ದಂಪತಿಯೊಬ್ಬರಿಗೆ ಮಗುವನ್ನು ನೀಡಿ 2 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ರೂ. 60,500 ನಗದು ಹಾಗೂ ಎರಡು ವಾಹನ ಜಪ್ತಿ ಮಾಡಲಾಗಿದೆ. ಇನ್ನು ಬಾಲಕನನ್ನು ರಕ್ಷಿಸಿ ತಂದೆ ತಾಯಿಗೆ ಪೊಲೀಸ್ ಅಧಿಕಾರಿಗಳು ಒಪ್ಪಿಸಿದ್ದಾರೆ.
ಏನಿದು ಘಟನೆ: ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕುಟುಂಬಕ್ಕೆ ಮಗು ಅವಶ್ಯಕತೆ ಇದೆ ಎಂದು ಯಾರೋ ಒಬ್ಬರು ಆರೋಪಿಗಳಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ, ಅನಾಥಾಶ್ರಮದಿಂದ ಮಗುವನ್ನು ಪಡೆದುಕೊಡುವಂತೆ ವಿನಂತಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಐವರು ಆರೋಪಿಗಳು ಸಂಚು ರೂಪಿಸಿ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯಲ್ಲಪ್ಪ ಚಿನ್ನಪ್ಪ ಬಹೂರೂಪಿ ಎಂಬ ಎರಡು ವರ್ಷದ ಮಗುವನ್ನು ಅಪಹರಿಸಿದ್ದಾರೆ. ಬಳಿಕ ಆಶ್ರಮದಿಂದ ತಂದಿರುವುದಾಗಿ ಕುಟುಂಬಕ್ಕೆ ಸುಳ್ಳು ಹೇಳಿ 2 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸುಳಿವು ಇಲ್ಲದಿದ್ದರೂ ತನಿಖೆಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಾಹಿತಿ ಸಂಗ್ರಹಿಸಿ ಅಪಹರಣಕ್ಕೆ ಒಳಗಾದ ಬಾಲಕನನ್ನು ರಕ್ಷಿಸಲಾಗಿದೆ.
ಇನ್ನು ಆರೋಪಿಗಳನ್ನು ಬಂಧಿಸಿದ ಪೋಲಿಸ್ ಅಧಿಕಾರಿಗಳಿಗೆ ಬೆಳಗಾವಿ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿನಂದನೆ ಸಲ್ಲಿಸಿದ್ದಾರೆ.