ಬೆಳಗಾವಿ : ಬಿಜೆಪಿ, ಆರ್ಎಸ್ಎಸ್ನವರು ರಾಜ್ಯದ ಜನತೆ ತಲೆ ತಗ್ಗಿಸುವಂತಹ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದವರಿಗೆ ಮೀಸಲಾತಿ ರದ್ದುಪಡಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಆರೋಪಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ.
ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ. ಲಕ್ಷಾಂತರ ಜನ ತ್ಯಾಗ, ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು. ಸಂವಿಧಾನದ ವಿರುದ್ಧ ಬಿಜೆಪಿ, ಮಂತ್ರಿಗಳು, ಸಂಘ ಪರಿವಾರದ ಸದಸ್ಯರು ಷಡ್ಯಂತ್ರ ಮಾಡೋದನ್ನ ನೋಡ್ತಿದ್ದೇವೆ ಎಂದರು.
ಬಹದೂರ್ ಎಸ್ ಜಾಫರ್ ನಾಯಕತ್ವ: ದೇಶದಲ್ಲಿ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ಬಹದೂರ್ ಎಸ್ ಜಾಫರ್ ವಹಿಸಿದ್ದರು. ಇದನ್ನು ಯಾರೂ ಸಹ ಮರೆಯೋಕ್ಕಾಗೋದಿಲ್ಲ. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಏನೂ ನಿರೀಕ್ಷೆ ಇಲ್ಲದೆ ಈ ಭಾರತ ದೇಶವನ್ನ ನಮ್ಮ ಕೈಗೆ ಕೊಟ್ಟಿದ್ದಾರೆ. ದೇಶ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ. ಏನಾದರೂ ಒಳ್ಳೆಯ ಕೆಲಸ ಮಾಡೋಣ ಎಂದರು.
ಮೀಸಲಾತಿ ರದ್ದು ಮಾಡುವ ಹುನ್ನಾರ : ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡ್ತಿದ್ದಾರೆ. ಮೊದಲು ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಮಾಡಲಾಗಿತ್ತು. ಬಳಿಕ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಸದ್ಯ ಮೀಸಲಾತಿ ರದ್ದು ಮಾಡಿ ಅವಕಾಶ ತಪ್ಪಿಸುವಂತಹ ಕೆಲಸ ನಡೀತಿದೆ. ಈಗ ಅಲ್ಪಸಂಖ್ಯಾತರ ಮೇಲೆ ನೇರವಾಗಿ ದೌರ್ಜನ್ಯ ಮಾಡಲಾಗುತ್ತಿದೆ.
2ನೇ ದರ್ಜೆ ನಾಗರಿಕರಾಗಿಸಲು ಪ್ರಯತ್ನ : ಬಹುಸಂಖ್ಯಾತರ ಭಾವನೆ ಕೆರಳಿಸಿ ಕೆಲವು ಸಮುದಾಯಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಪ್ರಯತ್ನ ಮಾಡುವ ಮೂಲಕ ಮನುಸ್ಮೃತಿ ಸಂವಿಧಾನ ಅಡಿಯಲ್ಲಿ ಪ್ರಬಲ ಜಾತಿ ಬಿಟ್ರೆ ಎಲ್ಲರೂ ಎರಡನೇ ದರ್ಜೆ ನಾಗರಿಕರು, ಅವರೆಲ್ಲ ಜೀತದಾಳುಗಳು, ಗುಲಾಮರು ಅನ್ನೋ ಭಾವನೆ ಮೂಡಿಸಲು ಬಿಜೆಪಿ, ಆರ್‌ಎಸ್ಎಸ್ ಪ್ರಯತ್ನ ಮಾಡುತ್ತಿದೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ದೇವಸ್ಥಾನದ ಹತ್ತಿರ ವ್ಯಾಪಾರ ಮಾಡಲು ಯಾರೂ ನಿರ್ಬಂಧ ಹೇರಕ್ಕಾಗಲ್ಲ. 2002ರಲ್ಲಿ ಕಾಂಗ್ರೆಸ್ ಪಕ್ಷ ಕಾನೂನು ತಂದಿದೆ. ದೇವಾಲಯದ ಕಟ್ಟಡದಲ್ಲಿ ಅನ್ಯ ಧರ್ಮೀಯರು ಮಾತ್ರ ವ್ಯಾಪಾರ ಮಾಡಬಾರದು ಅಂತಾ ಇತ್ತು. ರಸ್ತೆಯಲ್ಲಿ ವ್ಯಾಪಾರ ಮಾಡಬಾರದು ಎಂದು ಹೇಳಿಲ್ಲ. ಬಿಜೆಪಿಗೆ ಅಷ್ಟೊಂದು ಕಳಕಳಿ ಇದ್ರೆ ಜಾತಿ ಹೆಸರಿನಲ್ಲಿ ಇರೋ ಹೋಟೆಲ್, ಮಾರ್ಕೆಟ್ ಮುಚ್ಚಲಿ ಎಂದು ಸವಾಲು ಹಾಕಿದರು.
ಧರ್ಮದ ಹೆಸರಿನಲ್ಲಿ ಬೆಲೆ ಏರಿಕೆ ಮರೆಮಾಚಿಸಲಾಗ್ತಿದೆ : 130 ಕೋಟಿ ಭಾರತೀಯರಿಗೆ ಸಮಾನವಾದ ಹಕ್ಕು ಇದೆ. ಸಮಾನವಾದ ಅವಕಾಶ ಇದೆ, ಅದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇಶದಲ್ಲಿ ಬೆಲೆ ಏರಿಕೆ ನಿರಂತರವಾಗಿ ಹೆಚ್ಚಾಗಿದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದೆ. ರಾಷ್ಟ್ರದ ಗಡಿ ರಕ್ಷಣೆ ಮಾಡಲು ವಿಫಲರಾದ ಮೋದಿ ವೈಫಲ್ಯತೆ ಮುಚ್ಚಲು ಷಡ್ಯಂತ್ರ ಮಾಡಲಾಗುತ್ತಿದೆ. ಇದನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಸಂವಿಧಾನದ ವಿರುದ್ಧ ಮಾತನಾಡುವವರು ದೇಶದ್ರೋಹಿಗಳಾಗಿದ್ದು, ಸಂವಿಧಾನ ಮೇಲೆ ನಂಬಿಕೆ ಇಲ್ಲದವರು ದೇಶವನ್ನು ಬಿಟ್ಟು ಹೋಗಬೇಕು. ಆರ್‌ಎಸ್ಎಸ್ ಮುಖಂಡ ಮೋಹನ್ ಭಾಗವತ್ 2015ರಲ್ಲಿ ಬಿಹಾರದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕು ಎಂದಿದ್ದರು. ಇವರು ಬ್ರಿಟಿಷರ ಗುಲಾಮರಾಗಿದ್ದವರು, ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. 19 ಸಾವಿರ ಭಾಷೆಗಳು, 3,600 ಜಾತಿಗಳು, 7 ದೊಡ್ಡ ದೊಡ್ಡ ಧರ್ಮ ಇರುವ ದೇಶ ಭಾರತದಲ್ಲಿ ಒಂದೇ ಒಂದು ಧರ್ಮ, ಒಂದೇ ಒಂದು ಭಾಷೆ ಹೇರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮಂತ್ರಿಯಾಗುವ ವೇಳೆ ಸಂವಿಧಾನ ಆಶಯದಂತೆ ನಡೆದುಕೊಳ್ಳುತ್ತೇನೆ ಅಂತಾ ಪ್ರತಿಜ್ಞೆ ಮಾಡಿದ್ದ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ, ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅರೆಪ್ರಜ್ಞೆಯಲ್ಲಿರುವ ಅವರನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಹರಿಪ್ರಸಾದ್ ಆಗ್ರಹಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಮೋಷನ್ ಆಗಿ ಒಂದು ವರ್ಷವಾಗಿದೆ. ಸರ್ಕಾರದ ಬಳಿ ಬೇರೆ ಆಯ್ಕೆ ಇಲ್ಲ, ದಕ್ಷ ಅಧಿಕಾರಿ ಇಲ್ಲದ ಕಾರಣ ಅವರನ್ನೇ ಮುಂದುವರೆಸಲಾಗಿದೆ. ಇರೋದರಲ್ಲಿ ಸತ್ಯ ಹೇಳುವಂತಹ ಕಮಿಷನರ್ ಅವರಾಗಿದ್ದಾರೆ. ಆದರೆ ಯುವಕ ಚಂದ್ರು ಕೊಲೆ ಬಗ್ಗೆ ಮಾತನಾಡುವಾಗ ಬಲ್ಲ ಮೂಲಗಳ ವಲಯದ ಮಾಹಿತಿ ಎಂದು ಗೃಹ ಸಚಿವರು ಹೇಳಿದ್ದಾರೆ. ಇವರ ಬಲ್ಲಮೂಲ ಅಂದರೆ ನಾಗ್ಪುರ, ಕೇಶವಕೃಪಾದ ಬಲ್ಲಮೂಲಗಳೇ ಎಂದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ- ಆರ್‌ಎಸ್ಎಸ್ ಮುಖ್ಯಸ್ಥ ಭಾಗವತ್ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್