ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಅಭಯ್ ಪಾಟೀಲ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತ ಕೋರಲು ಆಗಮಿಸಿದ್ದು, ವಿಮಾನ ನಿಲ್ದಾಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಗರದ ಜಿಲ್ಲಾ ಕ್ರೀಡಾಂಗದಲ್ಲಿ ನಡೆಯುತ್ತಿರುವ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಕುಂದಾನಗರಿಗೆ ಆಗಮಿಸುತ್ತಿರುವ ಅಮಿತ್ ಶಾ ಇಂದು ಸಾಂಬ್ರಾ ವಿಮಾನ ನಿಲ್ದಾಣದಿಂದ 10.15ಕ್ಕೆ ವಿಶೇಷ ವಿಮಾನದ ಮೂಲಕ ಬಾಗಲಕೋಟೆಗೆ ತೆರಳಲಿದ್ದಾರೆ. ಅಲ್ಲಿಂದ ಬಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ಈಗಾಗಲೇ ರಮೇಶ ಜಾರಕಿಹೊಳಿ, ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ, ಮಾಜಿ ಸಚಿವ ಶಶಿಕಾಂತ್ ನಾಯಿಕ್, ಡಾ. ಸೋನಾಲಿ ಸರನೋಬತ್ ಸೇರಿದಂತೆ ಕೆಲ ಮುಖಂಡರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇದಲ್ಲದೇ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ ಕೂಡ ಆಗಮಿಸಿದ್ದಾರೆ.
ನಗರದಲ್ಲಿ ಸ್ಯಾನಿಟೈಸರ್ ಸಿಂಪಡಣೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಅಗಮಿಸುತ್ತಿರುವ ಹಿನ್ನೆಲೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಸ್ಯಾನಿಟೈಸರ್ ಸಿಂಪಡಣೆ ಕೈಗೊಳ್ಳಲಾಗಿದೆ. ನಗರದ ಪ್ರಮುಖ ರಸ್ತೆಗಳಾದ ಚನ್ನಮ್ಮ ಸರ್ಕಲ್, ಕೊಲ್ಲಾಪೂರ ಸರ್ಕಲ್ ಹಾಗೂ ಅಮಿತ್ ಶಾ ಪ್ರವಾಸ ಕೈಗೊಳ್ಳುವ ರಸ್ತೆಗಳಿಗೆ ಹಾಗೂ ಬಡಾವಣೆಗಳಿಗೆ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಲಾಗುತ್ತಿದೆ.