ಬೆಳಗಾವಿ: ''ಪಬ್ಲಿಸಿಟಿಗೆ ಏನು ಮಾಡಬೇಕು ಅದನ್ನು ಬಿಜೆಪಿ ಮಾಡುತ್ತದೆ. ಪೊಲಿಟಿಕಲ್ ಮೈಲೇಜ್‌ಗೆ ಮಾತ್ರ ಈ ಅಧಿವೇಶನವನ್ನು ಬಿಜೆಪಿಯವರು ಬಳಸುತ್ತಿದ್ದಾರೆ, ಅದು ಖಂಡನೀಯ'' ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ಇಂದು (ಬುಧವಾರ) ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಮಾಡಲಿ, ನಿಮಗೆ ಏನು ತೊಂದರೆನಾ? ವಿಪಕ್ಷದಲ್ಲಿ ಕುಳಿತು ಅವರಿಗೆ ಅದೊಂದೇ ಕೆಲಸ. ಪಬ್ಲಿಸಿಟಿಗಾಗಿ ಮಾಡೋ ಕೆಲಸ ಬಿಡಬೇಕು. ಆ ಕೆಲಸ ಬಿಟ್ಟು ಸರ್ಕಾರದಲ್ಲಿ ಪ್ರಶ್ನೆ ಮಾಡಬೇಕು'' ಎಂದು ಟಾಂಗ್ ಕೊಟ್ಟರು.
''ಬೆಳಗಾವಿಯಲ್ಲಿ ಅಧಿವೇಶನ ಇಟ್ಟಿರೋದು ಏಕೆ? ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಇವರು ಒಂದು ದಿವಸ ಸದನದ ಬಾವಿಯಲ್ಲಿ ಕುಳಿತರೇ ಹೇಗೆ? ವಿಪಕ್ಷಗಳಿಗೆ ಉತ್ತರ ಕರ್ನಾಟಕ ಬಗ್ಗೆ ಪರಿಜ್ಞಾನ ಇದೆಯಾ? ಉತ್ತರ ಕರ್ನಾಟಕ ಬಗ್ಗೆ ಮಾತನಾಡಿ ಅಂತಾ ಧರಣಿ ಮಾಡಬೇಕು, ಅದನ್ನ ಮಾಡಲ್ಲ ಅವರು'' ಎಂದು ಗುಡುಗಿದರು.
ಗಡಿಭಾಗದಲ್ಲಿ ಶಿಕ್ಷಕರ ಕೊರತೆ ಬಗ್ಗೆ ಮಾತನಾಡಿ, ''ಹಾಗೇನಿಲ್ಲ ನಮ್ಮ ಇಲಾಖೆ ಗಮನಕ್ಕೆ ಬಂದ್ ತಕ್ಷಣ ಸ್ಪಂದನೆ ಮಾಡ್ತಿದೀವಿ. ಈಗ 13 ಸಾವಿರ ಶಿಕ್ಷಕರ ನೇಮಕ ಆಗಿದ್ದು, ಮುಂದೆಯೂ ಮಾಡ್ತೀವಿ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಕನ್ನಡ ಶಾಲೆ ಮುಚ್ಚುವ ಪ್ರಶ್ನೆಯೇ ಬರಲ್ಲ. ಕೆಲವು ಸಲ ನಿಮಗೆ ಹಾಗೇ ಕಾಣಿಸುತ್ತದೆ. ಹಿಂದಿನ ಸರ್ಕಾರ ನಾಲ್ಕು ಸಾವಿರ ಶಾಲೆಗಳನ್ನು ಮುಚ್ಚಿದೆ. ಅದಕ್ಕೆ ನಾನು ಲೆಕ್ಕ ಕೊಡುತ್ತೇನೆ'' ಎಂದರು.
ಇನ್ನು ಆರ್‌ಟಿಐ ಕಾಯ್ದೆ ಮರು ತಿದ್ದುಪಡಿಗೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ ಅವರು, ''ಅದೆಲ್ಲ ಚರ್ಚೆ ಆಗಿದೆ, ಜನರಿಗೆ ಅನುಕೂಲ ಆಗುವ ರೀತಿ ನಮ್ಮ ಇಲಾಖೆ ಕೆಲ ತೀರ್ಮಾನ ಮಾಡುತ್ತದೆ. ಹಿಂದಿನ ಸರ್ಕಾರ ಮಾಡಿರೋದನ್ನು ಕರೆಕ್ಷನ್ ಮಾಡೋಕೆ ನಾ ಕುಳಿತುಕೊಂಡಿರೋದು. ಜನರಿಗೆ ಹಾಗೂ ಮಕ್ಕಳಿಗೆ ಅನುಕೂಲ ಆಗಬೇಕು'' ಎಂದರು.
''ಇಂದು ಸಹ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಒಂದೆರಡು ಶಾಲೆಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿಯೇ ಹೋಗಿ ಮಕ್ಕಳ ಜೊತೆ ಊಟ ಮಾಡಿ ವಿಧಾನಸಭೆಗೆ ಹೋಗುವೆ. ವಿಶ್ವಾಸ ಇಟ್ಟುಕೊಳ್ಳಿ, ಇಲಾಖೆಯಲ್ಲಿ ಬದಲಾವಣೆ ತರುವೆ. ಆರೋಪ ಬಗ್ಗೆ ದಾಖಲೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಕೆಲವು ತಪ್ಪುಗಳು ಸರಿ ಆಗುತ್ತೆ. ತಪ್ಪುಗಳು ನಮ್ಮ ಗಮನಕ್ಕೆ ಬಂದರೆ, ಅಧಿಕಾರಿಗಳು ಹೊಣೆ ಆಗ್ತಾರೆ'' ಎಂದು ಮಧು ಬಂಗಾರಪ್ಪ ತಿಳಿಸಿದರು.
ಇದನ್ನೂ ಓದಿ: ಯುವನಿಧಿ ನೋಂದಣಿ ಪ್ರಕ್ರಿಯೆ ಡಿಸೆಂಬರ್ 21ಕ್ಕೆ ಆರಂಭವಾಗಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್