ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಸಂತ್ರಸ್ತರಿಗೆ 5 ಸಾವಿರ ಕೋಟಿ ರೂ ಅಲ್ಲ, 5 ಪೈಸೆಯೂ ಪರಿಹಾರ ಕೊಟ್ಟಿಲ್ಲ ಎಂದು ಬಿಜೆಪಿ ನಾಯಕರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಕೃಷ್ಣಾ ತೀರದ ಜನರಿಗೆ ಬಜೆಟ್ ನಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬ ಮಾಜಿ ಸಚಿವ ಮುರುಗೇಶ ನಿರಾಣಿ ಆರೋಪಕ್ಕೆ ಇಂದು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಐದು ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದಿರುವ ನಿರಾಣಿಯವರು ಎಷ್ಟು ಖರ್ಚು ಮಾಡಿದ್ದಾರೆ. ಇಬ್ಬರಿಗಷ್ಟೇ ಸಾಂಕೇತಿವಾಗಿ ಚೆಕ್ ಕೊಟ್ಟಿದ್ದಾರೆ. ಆದರೆ ಅವರಿಗೂ ಹಣ ಮುಟ್ಟಿಲ್ಲ. ರಾಜಕೀಯ ಮಾಡಲು ನನ್ನ ಕ್ಷೇತ್ರಕ್ಕೆ ಬಂದು ಕಾರ್ಯಕ್ರಮ ನಡೆಸಿದ್ದರು. ಆದರೆ, ಒಂದು ರೂಪಾಯಿನ್ನೂ ಸಹ ಅವರು ಕೊಟ್ಟಿಲ್ಲ. ಸುಮ್ಮನೇ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ತಿರುಗೇಟು ಕೊಟ್ಟರು.
ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 4-5 ಕೋಟಿ ಹೆಚ್ಚುವರಿ ಟೆಂಡರ್ ಕರೆದಿದ್ದಾರೆ. ಅದೇ ರೀತಿ ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚುವರಿ ಟೆಂಡರ್ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 32 ಸಾವಿರ ಕೋಟಿ ಕೊಟ್ಟಿದ್ದೇವೆ. ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷದಿಂದ 5 ಲಕ್ಷ ರೂ. ಏರಿಸಿದ್ದೇವೆ. ಬಂದ್ ಆಗಿದ್ದ ಕೃಷಿ ಹೊಂಡ ಆರಂಭಿಸಿದ್ದೇವೆ. 8-9 ತಿಂಗಳಲ್ಲಿ ಮತ್ತೆ ಹೊಸ ಬಜೆಟ್ ಬರುತ್ತದೆ. ಆಗ ಹೆಚ್ಚಿನ ಯೋಜನೆಗಳಿಗೆ ಹಣ ಮೀಸಲಿಡುತ್ತೇವೆ ಎಂದು ಹೇಳಿದರು.
ಮಠಗಳಿಗೆ ಅನುದಾನ ಕಡಿತ: ಲಿಂಗಾಯತ ಮಠಗಳಿಗೆ ಅನುದಾನ ಕಡಿತಗೊಳಿಸಿದ್ದಾರೆ ಎಂಬ ಮಾಜಿ ಸಚಿವ ಸಿ ಸಿ ಪಾಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ ಬಿ ಪಾಟೀಲ್, ಲಿಂಗಾಯತ ಮಠಗಳಿಗೆ ಹಣ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ, ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಿದ್ದಕ್ಕೆ ನಾವು ಹೆಚ್ಚಿನ ಹಣ ಕೊಟ್ಟಿಲ್ಲ. ಬಿಬಿಎಂಪಿಯಲ್ಲಿ 40- 50 ಸಾವಿರ ಕೋಟಿ ಅನುದಾನವಿಲ್ಲದೇ, ಗಾಡಿ ಹೊಡೆದು ಹೋಗಿಬಿಟ್ಟಿದ್ದಾರೆ. ಹಣ ಇಲ್ಲದೇ ಟೆಂಡರ್ ಕರೆದ ಉದ್ದೇಶವಾದರೂ ಏನು..? ಇವರ ಅನುದಾನಕ್ಕೆ ಸೀಮಿತ ಆಗಿರಬೇಕಿತ್ತಲ್ಲವೇ..? ಇವರ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಿಜೆಪಿ ಸರ್ಕಾರದ ಅಕ್ರಮಗಳ ಕುರಿತು ತನಿಖೆ ಆರಂಭವಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಮುನಿ ಹತ್ಯೆಯಲ್ಲಿ ರಾಜಕೀಯ ಬೆರೆಸಬಾರದು: ಹಿರೇಕೋಡಿಯ ಜೈನ ಮುನಿಗಳ ಕೊಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ದಿಸೆಯಲ್ಲಿ ಸರ್ಕಾರ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳುತ್ತಾರೆ. ನಮ್ಮ ಸರ್ಕಾರ ಇಂತಹ ಕೃತ್ಯಗಳಿಗೆ ಆಸ್ಪದ ಕೊಡುವುದಿಲ್ಲ ಎಂದ ಅವರು, ಸರ್ಕಾರದ ಮೇಲೆ ನಂಬಿಕೆ ಇಲ್ಲ. ಸರ್ಕಾರದಿಂದ ಪೊಲೀಸರ ಮೇಲೆ ಒತ್ತಡ ಎಂಬ ಶಾಸಕ ಅಭಯ ಪಾಟೀಲ್ ಆರೋಪಕ್ಕೆ ಈ ರೀತಿಯಾಗಿ ಯಾವುದನ್ನೋ ಯಾವುದಕ್ಕೂ ಹೋಲಿಸಬಾರದು. ಇದರಲ್ಲಿ ಕಾಂಗ್ರೆಸ್ ಪಾತ್ರ ಏನಿದೆ..? ಶಾಸಕ ಲಕ್ಷ್ಮಣ ಸವದಿ ಕೂಡ ಅಲ್ಲಿಗೆ ಭೇಟಿ ನೀಡಿ ತೀವ್ರ ತರಹದ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಅಭಯ್ ಪಾಟೀಲ್ ಅದರಲ್ಲಿ ರಾಜಕೀಯ ಬೆರೆಸಬಾರದು. ಬೇರೆ ಬೇರೆ ಸರ್ಕಾರಗಳಿದ್ದಾಗ ಇಂತಹ ಘಟನೆಯಾಗಿವೆ. ಇವು ಹೇಯ ಕೃತ್ಯ. ಇಂತಹ ಆರೋಪಿಗಳನ್ನು ಕ್ಷಮಿಸಬಾರದು ಎಂದು ಎಂ ಬಿ ಪಾಟೀಲ್ ಹೇಳಿದರು.
ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಗೆ ಆದ್ಯತೆ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಮತ್ತು ಮೈಸೂರು ಸೇರಿ ಒಟ್ಟಾರೆ ರಾಜ್ಯದಲ್ಲಿ ಸಮಗ್ರವಾಗಿ ಕೈಗಾರಿಕೆಗಳು ಬರಬೇಕು. ಈ ಮೂಲಕ ನಮ್ಮ ರಾಜ್ಯದ ಜನರಿಗೆ ಉದ್ಯೋಗ ಸಿಗಬೇಕು. ಹೂಡಿಕೆ, ಬಂಡವಾಳ ಬರುವುದರ ಜೊತೆಗೆ ರಾಜ್ಯದ ರೆವಿನ್ಯೂ ಕೂಡ ಹೆಚ್ಚಾಗಬೇಕು. ನಿರುದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಅದೇ ರೀತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಶಕ್ತಿ ತುಂಬಲಿದ್ದೇವೆ. ಏಕಗವಾಕ್ಷಿ ಯೋಜನೆ ಸೇರಿ ಕೈಗಾರಿಕೆ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತಂದು ಮಾದರಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಇದರಲ್ಲಿ ಬೆಳಗಾವಿಗೂ ವಿಶೇಷ ಆದ್ಯತೆ ಕೊಡುತ್ತೇವೆ ಎಂದು ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದರು.
ಸರ್ಕಾರ ಬಂದು ಎರಡು ತಿಂಗಳಾಯಿತು ಇನ್ನು ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ವಿಪಕ್ಷ ನಾಯಕರ ಆಯ್ಕೆ ಏಕೆ ಆಗಿಲ್ಲ ಎಂದು ನಿರಾಣಿ ಅವರನ್ನೇ ಕೇಳಿ ಎಂದ ಎಂ ಬಿ ಪಾಟೀಲ್, ನಮ್ಮ ಜಿಲ್ಲೆಯವರೇ ಆದರೆ ಸಂತೋಷ ಎಂದರು.
ಇದನ್ನೂಓದಿ:G-20 summit: ಜಿ-20 ಶೃಂಗಸಭೆ: ನವವಧುವಿನಂತೆ ಶೃಂಗಾರಗೊಂಡ ಐತಿಹಾಸಿಕ ಹಂಪಿ