ಚಿಕ್ಕೋಡಿ : ಕಳೆದ ಒಂದು ವರ್ಷದಲ್ಲಿ ಹಲವಾರು ಸವಾಲುಗಳನ್ನ ಬಿಜೆಪಿ ಸರ್ಕಾರ ಎದುರಿಸಿದೆ. ಕಳೆದ ಬಾರಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಾಗ ಸಿಎಂ ಯಡಿಯೂರಪ್ಪ ಅವರು ದಾಖಲೆ ಪ್ರಮಾಣದಲ್ಲಿ ಪರಿಹಾರ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಚಿಕ್ಕೋಡಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಪ್ರವಾಹದಲ್ಲಿ 25 ಜಿಲ್ಲೆಗಳ 119 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿ ಅವರಿಗೆ ಸರ್ಕಾರ ಪರಿಹಾರ ನೀಡಿದೆ. ಕೇಂದ್ರ ಸರ್ಕಾರ 1,869 ಕೋಟಿ ರೂ. ಪರಿಹಾರ ನೀಡಿದೆ. ರಾಜ್ಯ ಸರ್ಕಾರ 6,108 ಕೋಟಿ ಹಣ ಮಂಜೂರು ಮಾಡಿ ಪ್ರವಾಹಕ್ಕೆ ಒಳಗಾದ ಜನರಿಗೆ ಪರಿಹಾರ ನೀಡಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿ ₹4 ಸಾವಿರ ಹಣವನ್ನು ನೀಡಿದೆ. ನೇಕಾರರ ಹಾಗೂ ಮೀನುಗಾರರ ಸಾಲ ಮನ್ನಾ ಘೋಷಣೆ ಮಾಡಿದೆ. ನೇಕಾರರ ಸಾಲ ಮನ್ನಾ ಯೋಜನೆಯಿಂದ 98.29 ಕೋಟಿ ರೂ. ವೆಚ್ಚವಾಗಲಿದ್ದು, 29,621 ನೇಕಾರರು ಅನುಕೂಲ ಪಡೆಯಲಿದ್ದಾರೆ. ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ 2019 ಜನವರಿಯಿಂದ ಮಾರ್ಚ್ 31ರ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ ನೇಕಾರರಿಗೂ ಈ ಸೌಲಭ್ಯ ವಿಸ್ತರಿಸಿ ಕೋವಿಡ್ ಸಂಕಷ್ಟ ಕಾಲದಲ್ಲಿ ಮಾನವೀಯತೆ ಮರೆದಿದೆ ಎಂದರು.
ಬಿಜೆಪಿ ಸರ್ಕಾರ ಕೋವಿಡ್ ವಿಚಾರವಾಗಿ ಭ್ರಷ್ಟಾಚಾರ ಮಾಡಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್-19 ಸಲುವಾಗಿ ನಾವು ಖರ್ಚು ಮಾಡಿದೆಷ್ಟು ಅವರು ಆರೋಪ ಮಾಡಿದೆಷ್ಟು ಎನ್ನುವುದರ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ನಮ್ಮ ಕ್ಯಾಬಿನೆಟ್ ಸಚಿವರು ಉತ್ತರ ನೀಡಿದ್ದಾರೆ. ವಿರೋಧ ಮಾಡಲಿಕ್ಕಾಗಿಯೇ ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸಚಿವರು ಸಮರ್ಪಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ಕಳೆದ ಒಂದು ವಾರದಿಂದ ಕರ್ನಾಟದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸರ್ಕಾರ ವೈದ್ಯರ ಜೊತೆಗೆ ಖಾಸಗಿ ವೈದ್ಯರು ಕೂಡ ಕೈ ಜೋಡಿಸುತ್ತಿದ್ದಾರೆ. ಕೆಲವೊಂದಿಷ್ಟು ವೈದ್ಯರು ಕೊರೊನಾ ಪಾಸಿಟಿವ್ ಇದ್ದರೂ ಅವರಿಗೆ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಂತಹ ವೈದ್ಯರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.