ಬೆಳಗಾವಿ: ನಿಂತ ನೀರಾಗಿರುವ ಕಾಂಗ್ರೆಸ್ ಪಕ್ಷದಿಂದ ದೇಶದಲ್ಲಿ ಬದಲಾವಣೆ, ಅಭಿವೃದ್ಧಿ ಸಾಧ್ಯವಿಲ್ಲ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಧರ್ಮನಾಥ ಸಭಾಂಗಣದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ವಿಧಾನಸಭಾ ಆಶ್ರಯದಲ್ಲಿ ಲೋಕಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸಿ, ಜಾಗೃತಿ ಮೂಡಿಸುತ್ತಿದ್ದ ಸುರೇಶ ಅಂಗಡಿಯವರು ತಾವೇ ಕೊರೊನಾ ಬಗ್ಗೆ ಎಚ್ಚರ ವಹಿಸಲಿಲ್ಲ, ಎಂದು ಬೇಸರ ವ್ಯಕ್ತಪಡಿಸಿದರು.
ಸುರೇಶ್ ಅಂಗಡಿ ನಮ್ಮನ್ನು ಬಿಟ್ಟು ಹೋದ್ರೂ ಕೂಡ ಅವರು ಮಾಡಿರುವ ಸಾಧನೆ ನಮ್ಮ ಕಣ್ಣಮುಂದೆ ಇದೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮಂಗಳಾ ಅಂಗಡಿ ಅವರ ಗೆಲುವಿಗೆ ಸಹಕಾರಿ ಆಗಲಿವೆ. ಹುಬ್ಬಳ್ಳಿ-ಧಾರವಾಡ ಇದೀಗ ಅವಳಿ ನಗರವಿದೆ. ಮುಂಬರುವ ದಿನದಲ್ಲಿ ಧಾರವಾಡ ಕಿತ್ತೂರ ರೈಲು ಹಳಿ ಜೋಡಣೆಯಾದ ಬಳಿಕ ಹುಬ್ಬಳ್ಳಿ-ಧಾರವಾಡ -ಬೆಳಗಾವಿ ತ್ರಿವಳಿ ನಗರ ಆಗಲಿವೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಡಿಸಿದರು.
ದೇಶಕ್ಕೆ ನಿಮ್ಮ ಕೊಡುಗೆಯೇನು?
ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತ ನಡೆಸಿದರೂ ದೇಶ ಅಭಿವೃದ್ಧಿ ಕಾಣಲಿಲ್ಲ. ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ, ಡಿಕೆಶಿ ಯಾವ ಮುಖ ಹೊತ್ತುಕೊಂಡು ಪ್ರಚಾರಕ್ಕೆ ಬರುತ್ತಿದ್ದಾರೆ. ಬೆಳಗಾವಿಗೆ ಏನು ಮಾಡಿದ್ದೀರಿ? ದೇಶಕ್ಕೆ ಏನು ಮಾಡಿದ್ದೀರಿ ಎಂದು ಸಚಿವ ಶೆಟ್ಟರ್ ಪ್ರಶ್ನಿಸಿದರು.
ಮಂಗಳಾರನ್ನು ಗೆಲ್ಲಿಸಿ ಸುರೇಶ್ ಅಂಗಡಿ ಆತ್ಮಕ್ಕೆ ಶಾಂತಿ ದೊರಕಿಸಿ:
ಕುಡಿಯಲು ನೀರು ಕೊಡಲಿಲ್ಲ. ಒಳ್ಳೆ ರಸ್ತೆ ಕೊಡಲಿಲ್ಲ. ನೀವು ಬೆಳಗಾವಿಗೆ ಬರಬೇಡಿ, ನಿಮಗೆ ವೋಟ್ ಹಾಕಲ್ಲ. ವಾಪಸ್ ಹೋಗಿ ಅಂತಾ ಕಾಂಗ್ರೆಸ್ನವರಿಗೆ ಮತದಾರರು ಹೇಳಬೇಕು. ಮಂಗಳಾ ಅಂಗಡಿಯವರಿಗೆ ಹೆಚ್ಚಿನ ಮತಗಳನ್ನು ನೀಡಬೇಕು. ಅವರನ್ನು ಗೆಲ್ಲಿಸಿದ್ರೆ ಸುರೇಶ್ ಅಂಗಡಿಯವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ?
ನಮ್ಮ ಅಭ್ಯರ್ಥಿ ಹೆಸರು ಬೇಗ ಅನೌನ್ಸ್ ಮಾಡಿದ್ದರೆ ಕನಕಪುರ ಬಂಡೆ ಒಡೆದು ಹೋಗುತ್ತಿತ್ತು. ಮುಂದೆ ಬರುವ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೊನ್ನೆ ಸುತ್ತಲಿದೆ. ಈಗಲೂ ಕೂಡ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತಾ ದುರ್ಬಿನ್ ಹಾಕಿ ಹುಡಕಬೇಕಿದೆ ಎಂದು ಕೈಗಾರಿಕಾ ಸಚಿವರು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ-ಡಿಕೆಶಿ ಫೈಟ್:
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾರು ಮುಖ್ಯಮಂತ್ರಿ ಆಗಬೇಕೆಂದು ಫೈಟ್ ಶುರುವಾಗಿದೆ. ರಾಜ್ಯದಲ್ಲಿ ಯಾರು ಯಾರು ಭವಿಷ್ಯ ಹೇಳುತ್ತಾರೋ ಅವರ ಬಳಿ ಡಿಕೆಶಿ ಹೋಗಿ ಬಂದಿದ್ದಾರೆ. ಭವಿಷ್ಯ ಹೇಳುವವರು ನೀವೇ ಮುಖ್ಯಮಂತ್ರಿ ಆಗುತ್ತೀರಿ ಅಂತಾ ಡಿಕೆಶಿಗೆ ಹೇಳಿದ್ದಾರೆ. ಆದ್ರೆ, ಇತ್ತ ಸಿದ್ದರಾಮಯ್ಯ ತಾನೇ ಮುಖ್ಯಮಂತ್ರಿ ಆಗ್ತೀನಿ ಅಂತಿದ್ದಾರೆ. ಅಲ್ಲದೇ ಡಿ ಕೆ ಶಿವಕುಮಾರ್ ಸಿಎಂ ಆಗಲು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ನಿಮ್ಮಲ್ಲಿ ಯಾರು ಸಿಎಂ ಆಗ್ತೀರಿ ಅನ್ನೋದನ್ನು ಸ್ಪಷ್ಟ ಮಾಡಿಕೊಂಡು ಪ್ರಚಾರಕ್ಕೆ ಬನ್ನಿ ಎಂದು ಶೆಟ್ಟರ್ ಸವಾಲು ಹಾಕಿದರು.
ಇದನ್ನೂ ಓದಿ: ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ, ಸಂಶಯ ಪಡುವಂಥದ್ದೇನಿಲ್ಲ : ಜಗದೀಶ್ ಶೆಟ್ಟರ್
ಸಚಿವ ಉಮೇಶ್ ಕತ್ತಿ ಮಾತನಾಡಿ, ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಶೇ. 80ಕ್ಕೂ ಹೆಚ್ಚಿನ ಮತದಾನ ಆಗಬೇಕು. ಆಗ ಮಾತ್ರ ಬಿಜೆಪಿ ಗೆಲ್ಲಲಿದೆ. ಈಗಾಗಲೇ ಬೈಲಹೊಂಗಲ, ಸವದತ್ತಿ, ರಾಮದುರ್ಗ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇವೆ. ಜನರ ಬೆಂಬಲ ನೋಡಿದ್ರೆ 5 ಲಕ್ಷಕ್ಕೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.