ಬೆಳಗಾವಿ: ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡಯಲಿದ್ದು, ಸಂಪುಟ ವಿಸ್ತರಣೆಯ ಕಸರತ್ತು ಕೊನೆಗೊಳ್ಳುವ ಸಾಧ್ಯತೆ ಇದೆ.
ಬೆಳಗಾವಿ ಇಂದಿನಿಂದ ಎರಡು ದಿನಗಳ ಕಾಲ ಕೇಸರಿ ಮಯವಾಗಲಿದೆ. ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಹಾಗೂ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯ ಬಿಜೆಪಿ ನಾಯಕರು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ದೆಹಲಿ ವರಿಷ್ಠರು ಪಾಲ್ಗೊಳ್ಳಲಿದ್ದಾರೆ.
ಹೈಕಮಾಂಡ್ ನೀಡಿರುವ ಸಂಪುಟ ವಿಸ್ತರಣೆ ಸಂದೇಶವನ್ನು ಅರುಣ್ ಸಿಂಗ್ ಸಭೆಯಲ್ಲಿ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ಸಂಬಂಧ ಇರುವ ಗೊಂದಲಕ್ಕೆ ಇಂದು ನಡೆಯುವ ಸಭೆಯಲ್ಲಿ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾನುವಾರವೇ ಸಂಪುಟ ವಿಸ್ತರಣೆಗೆ ಮುಹೂರ್ತ?
ಕುಂದಾನಗರಿಯಲ್ಲಿ ನಡೆಯಲಿರುವ ಕೇಸರಿ ಸಭೆಯಲ್ಲೇ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಯಲಿದ್ದು, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ವರಿಷ್ಠರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಮೂಲ ಮತ್ತು ವಲಸಿಗರ ನಡುವಿನ ತಿಕ್ಕಾಟ ತಾರಕ್ಕಕ್ಕೇರಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆಯೂ ಶಾಸಕರಿಂದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲಾಗಿದ್ದು, ಈ ವಿಚಾರಗಳ ಬಗ್ಗೆಯೂ ಸೂಕ್ತ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಜೋರಾಗಿ ಸಂಪುಟ ವಿಸ್ತರಣೆಯ ಕೂಗು ಕೆಳಿ ಬರ್ತಿದೆ. ವಲಸಿಗ ಶಾಸಕರು ಸಂಪುಟ ವಿಸ್ತರಣೆಯ ವಿಚಾರದ ಬಗ್ಗೆ ಲಾಭಿ ನಡೆಸ್ತಿದ್ರೆ, ಮೂಲ ಶಾಸಕರು ಸಂಪುಟ ಪುನಾರಚನೆ ಆಗಲಿ ಎಂಬ ಮನಸ್ಥಿತಿಯಲ್ಲಿದ್ದಾರೆ. ಈ ಎಲ್ಲ ವಿಚಾರಗಳೂ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಸುಧೀರ್ಘ ಚರ್ಚೆ ಆಗಿ, ಅಂತಿಮ ರೂಪ ಪಡೆಯಲಿವೆ ಎಂದು ಹೇಳಲಾಗುತ್ತಿದೆ.