ಚಿಕ್ಕೋಡಿ: ರಾಜ್ಯ ಉಪ ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳು ಭರ್ಜರಿಯಾಗಿ ಮತ ಬೇಟೆ ನಡೆಸಿದ್ದು, ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ. ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಸಮಾವೇಶ, ಸಭೆಗಳ ಮೂಲಕ ಪ್ರಚಾರ ಕಾರ್ಯ ಜೋರಾಗಿ ನಡೆದಿದೆ.
ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಮತಯಾಚನೆ ನಡೆಸಿದ್ದು, ಇಂದು ಶೇಡಬಾಳ ಗ್ರಾಮದಲ್ಲಿ ಬಿಜೆಪಿ ಸಮಾವೇಶ ನಡೆಸಲಾಯಿತು. ಶೇಡಬಾಳ ಗ್ರಾಮದ ಪಿಕೆಪಿಎಸ್ ಬಳಿಯ ಆವರಣದಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, ಕುಡಚಿ ಶಾಸಕ ಪಿ.ರಾಜೀವ್, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಸರ್ಕಾರದಲ್ಲಿ ಅನೇಕ ಹಿಂದೂಗಳ ಕಗ್ಗೊಲೆ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಕೊಲೆಯಾಗಿದೆ ಎಂದರು. ಸಿದ್ದರಾಮಯ್ಯ ಸರ್ಕಾರ ಕಣ್ಣೀರು ಬರದ ಸರ್ಕಾರವಾಗಿತ್ತು. ಅವರು ರೈತರಿಗೆ ಆತ್ಮಹತ್ಯೆ ಭಾಗ್ಯಗಳನ್ನು ಕೊಟ್ಟಿದ್ದು, ಸಮುದಾಯ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಗುಡುಗಿದರು. ಉಪ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಗುಂಡೂರಾವ್ ಅಷ್ಟೇ ಇರ್ತಾರೆ. ಉಳಿದವರು ಬಿಜೆಪಿ ಪಕ್ಷಕ್ಕೆ ಬರ್ತಾರೆ ನಾವು ಇನ್ನಷ್ಟು ಭದ್ರವಾಗುತ್ತೇವೆ ಎಂದರು. ಇನ್ನು ಬಿಜೆಪಿ ಪರ ವಾತಾವರಣ ಇದ್ದು, ಯುವಕರು ಸ್ಫೂರ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು. ಅತಿ ಹೆಚ್ಚು ಯುವಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹತಾಶರಾಗಿದ್ದು, ಅವರಿಗೆ ಭಯ ಶುರುವಾಗಿದೆ. ಈ ಚುನಾವಣೆಯಲ್ಲಿ ಅವರು ಸೋಲುತ್ತಾರೆ ಎಂದು ಖಾತ್ರಿಯಾಗಿದೆ. ಹಾಗಾಗಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕುಡಚಿ ಶಾಸಕ ಪಿ.ರಾಜೀವ್ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಬೇಕು ಎಂದು ರಾಜ್ಯದ ಜನರ ಆಸೆ ಇತ್ತು. ಇದೀಗ ಅವರು ಸಿಎಂ ಆಗಿದ್ದಾರೆ. ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಎಂದರು. ಸಮ್ಮಿಶ್ರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರವನ್ನು ಬಿಟ್ಟು ಶ್ರೀಮಂತ ಪಾಟೀಲ್ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆಯಾಗಬೇಕು ಎಂದರೆ ಮತ್ತೊಮ್ಮೆ ಶ್ರೀಮಂತ ಪಾಟೀಲ್ ಅವರನ್ನು ಗೆಲ್ಲಿಸಿಕೊಡಿ ಎಂದು ಹೇಳಿದರು.