ಬೆಳಗಾವಿ: ಮಸೀದಿಗಳಲ್ಲಿ ಅಜಾನ್ ಕೂಗಲು ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಹೀಗಿದ್ದರೂ ಅಜಾನ್ ಕೂಗುವುದನ್ನು ನಿಲ್ಲಿಸಲು ಬಿಜೆಪಿ ಸರ್ಕಾರಕ್ಕೆ ಆಗಲಿಲ್ಲ. ಇದನ್ನು ತಡೆಯಲಾಗದ ಸರ್ಕಾರ ಹೇಡಿ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 5ಕ್ಕೆ ಎಲ್ಲ ಮಸೀದಿಗಳಲ್ಲಿ ಅಜಾನ್ ಕೂಗಲಾಗುತ್ತದೆ. ಇದರಿಂದ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಅಜಾನ್ ಶಬ್ಧ ಶಾಸಕರಿಗೆ, ಮಂತ್ರಿಗಳಿಗೆ, ಮುಖ್ಯಮಂತ್ರಿಗೆ ಕೇಳುತ್ತಿಲ್ಲವೇ? ಕೇಳಿದ್ರೂ ಯಾಕೆ ಅದನ್ನು ತಡೆಯಲಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಆರ್ಥಿಕ ಬಹಿಷ್ಕಾರಕ್ಕೆ ಬೆಂಬಲ: ಮುಸ್ಲಿಂ ಸಮುದಾಯಕ್ಕೆ ಆರ್ಥಿಕ ಬಹಿಷ್ಕಾರ ಹಾಕುತ್ತಿರುವ ಪ್ರಕ್ರಿಯೆ ಇಡೀ ರಾಜ್ಯಕ್ಕೆ ಹಬ್ಬುತ್ತಿದೆ. ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆ ಬೆಂಬಲ ಇದೆ. ರಾಜ್ಯಾದ್ಯಂತ ಆರ್ಥಿಕ ಬಹಿಷ್ಕಾರ ಹಾಕಲು ಶ್ರೀರಾಮ ಸೇನೆ ಆಂದೋಲನ ನಡೆಸಲಿದೆ ಎಂದರು.
ಪಂಡಿತರ ವಿಚಾರದಲ್ಲಿ ಬಿಜೆಪಿದ್ದೂ ತಪ್ಪಿದೆ: ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹಿಂದಿನ ಕೇಂದ್ರ ಸರ್ಕಾರದ್ದೂ ತಪ್ಪಿದೆ. ಆಗ ಕೇಂದ್ರ ಸರ್ಕಾರ ಬಿಜೆಪಿಯ ಭಾಗವಾಗಿದ್ದು, ಹಲವರು ಸಚಿವರಾಗಿದ್ದರು. ಹೀಗಿದ್ದರೂ ಆಗ ಬಿಜೆಪಿ ನಾಯಕರು ಬಾಯಿಮುಚ್ಚಿಕೊಂಡು ಕುಳಿತಿದ್ದರು. ಎಂದು ಹೇಳಿದರು.
ಇದನ್ನೂ ಓದಿ: ದೇಗುಲಗಳ ಆವರಣದಲ್ಲಿ ಹಿಂದೂಯೇತರರ ವ್ಯಾಪಾರ ನಿರ್ಬಂಧಿಸಲು ಶ್ರೀರಾಮ ಸೇನೆ ಆಗ್ರಹ