ಚಿಕ್ಕೋಡಿ: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜು ಕಾಗೆಯವರಿಗೆ ಈಗ ನಡೆಯುವ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಬೇಕಿತ್ತು. ಆದರೆ, ಬಿಜೆಪಿ ಪಕ್ಷ ಕಾಗೆ ಬದಲಾಗಿ ಅನರ್ಹ ಶಾಸಕ ಶ್ರೀಮಂತ ಪಾಟೀಲರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುತ್ತಿರುವುದು ಕಾಗೆಯವರ ಕೋಪಕ್ಕೆ ಕಾರಣವಾಗಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಕಟ್ಟಾಳು ಎನಿಸಿಕೊಂಡಿದ್ದ, ರಾಜು ಕಾಗೆ ಕೊನೆಗೂ ಕಾಂಗ್ರೆಸ್ ಕಡೆ ಮುಖ ಮಾಡುವ ಮಾತುಗಳು ಕಾಗವಾಡ ಮತಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.
ಅನರ್ಹ ಶಾಸಕ ಶ್ರೀಮಂತ ಪಾಟೀಲ, ಇಲ್ಲವೇ ಅವರ ಮಗ ಶ್ರೀನಿವಾಸ ಪಾಟೀಲಗೆ ಟಿಕೆಟ್ ನೀಡುತ್ತಾರೆ ಎಂಬ ಉಹಾಪೋಹಗಳ ಮಧ್ಯೆ, ಬುಧವಾರ ರಾಜ್ಯ ಸರ್ಕಾರ ಮಾಜಿ ಶಾಸಕ ರಾಜು ಕಾಗೆಯವರಿಗೆ ಕಾಡಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರುವುದು ಖಚಿತ ಪಡಿಸಿದಂತಾಗಿದೆ.
ನಾಲ್ಕು ಬಾರಿ ಶಾಸಕನಾದವರಿಗೆ ಕಾಡಾ ಅಧಿಕಾರ ಸ್ಥಾನ ಬೇಕಿಲ್ಲ ಎಂದು ಕಾಗೆ ಅವರು ತಿರಸ್ಕಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಕಾಗವಾಡ ಕ್ಷೇತ್ರದ ಸ್ಥಿತಿ ಭಿನ್ನವಾಗಿದ್ದು, ರಾಜು ಕಾಗೆ ಅವರು ಸರ್ಕಾರದ ಈ ಆದೇಶವನ್ನು ಧಿಕ್ಕರಿಸುವ ಎಲ್ಲ ಲಕ್ಷಣಗಳು ಕ್ಷೇತ್ರ ಮೂಡುತ್ತಿವೆ.
ಬಿಜೆಪಿಯ ನಡೆಯನ್ನು ಅರಿತಿರುವ ಕಾಂಗ್ರೆಸ್ ಮೊದಲಿನಿಂದಲೂ ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ. ಆದರೆ, ಈಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜು ಕಾಗೆ ಪಕ್ಷ ತ್ಯಜಿಸುವ ಬಗ್ಗೆ ಖಾತ್ರಿ ಆಗಿದ್ದು ಕಾಗವಾಡ ಇಲ್ಲವೇ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತುಗಳಿಗೆ ಪುಷ್ಟಿ ನೀಡುತ್ತಿವೆ.
ಅನರ್ಹರು ಸರ್ಕಾರ ರಚನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಪಕ್ಷ ಸಂಘಟಿಸಿದ ನಿಷ್ಟಾವಂತರ ಬೆನ್ನಿಗೆ ಚೂರಿ ಹಾಕುವುದು ಯಾವ ನ್ಯಾಯ? ಎಂಬುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಪ್ರಶ್ನಿಯಾಗಿದೆ.
ಬಿಜೆಪಿ ಟಿಕೆಟ್ ಕೈ ತಪ್ಪಿದಲ್ಲಿ ರಾಜು ಕಾಗೆಯವರು ಕಾಂಗ್ರೆಸ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.