ಚಿಕ್ಕೋಡಿ : ನಿಪ್ಪಾಣಿ ನಗರಸಭೆ ಕಟ್ಟಡದ ಮೇಲೆ ಭಗವಾಧ್ವಜ ಹಾರಾಡುತ್ತಿದೆ. ಈ ಧ್ವಜದ ಕಾವಲಿಗಾಗಿ ಕರ್ನಾಟಕ ಸರ್ಕಾರ ಸಶಸ್ತ್ರ ಮೀಸಲು ಪಡೆ ಮೀಸಲಿರಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳ ಮೇಲೆ ಕರ್ನಾಟಕದ ಧ್ವಜ ಹಾರಬೇಕು. ಆದರೆ, ನಿಪ್ಪಾಣಿ ನಗರಸಭೆ ಕಟ್ಟಡದ ಮೇಲೆ ಭಗವಾಧ್ವಜ ಹಾರಾಡುತ್ತಿದೆ.
ಈ ಭಗವಾಧ್ವಜಕ್ಕೆ ಪೊಲೀಸರು ಸೆಕ್ಯೂರಿಟಿ ನೀಡುತ್ತಿದ್ದಾರೆ. ಕಾನೂನು ಬಾಹಿರ ಹಾಗೂ ಕನ್ನಡಿಗರನ್ನು ಕೆರಳಿಸುವ ಈ ರೀತಿಯ ವರ್ತನೆಗೆ ಸರ್ಕಾರ ಬೆಂಬಲ ಕೊಡುತ್ತಿರುವುದು ಸಮಂಜಸವಲ್ಲ ಎಂದು ಹರಿಹಾಯ್ದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಐದು ಸಚಿವರಿದ್ದು, ಇವರೆಲ್ಲರೂ ಉದ್ದವ್ ಠಾಕ್ರೆ ತಲೆ ಸೆರಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ತಲೆ ಸರಿ ಇರುವ ಇವರಿಗೆ ನಿಪ್ಪಾಣಿಯಲ್ಲಿ ಹಲವಾರು ವರ್ಷಗಳಿಂದ ಭಗವಾ ಧ್ವಜ ಹಾರಾಡುತ್ತಿರುವುದು ಗೋಚರಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಂದಿನ 10 ದಿನಗಳಲ್ಲಿ ಭಗವಾಧ್ವಜವನ್ನು ತೆರವುಗೊಳಿಸಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಿ. ಒಂದು ವೇಳೆ ಧ್ವಜ ತೆರವುಗೊಳಿಸದಿದ್ದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.