ಬೆಳಗಾವಿ : ಕೆರೆಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಹೊಸ ಕೆರೆಗಳ ಉಗಮಕ್ಕೆ ನರೇಗಾ ಯೋಜನೆ ಬಲ ನೀಡುತ್ತಿದೆ. ಕೆಲಸವಿಲ್ಲದ ಕೈಗಳಿಗೆ ಕೆಲಸ ನೀಡುವ ಮೂಲಕ ಜಿಲ್ಲೆಯ ಹಸರೀಕರಣಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ದಿಟ್ಟ ಹೆಜ್ಜೆಇಟ್ಟಿದೆ.
ರಾಜ್ಯ ಸರ್ಕಾರದ ಅದೊಂದು ಯೋಜನೆ ಮೂಲಕ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಜತೆಗೆ ಸುತ್ತಲಿನ ಪರಿಸರ ಸೇರಿ ಅರಣ್ಯ ಬೆಳವಣಿಗೆ ಹೊಂದಬೇಕೆಂಬ ಸದುದ್ದೇಶ ಇಟ್ಟುಕೊಂಡು ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 188 ಕೆರೆಗಳ ನಿರ್ಮಾಣಕ್ಕೆ ಕೈ ಹಾಕಲಾಗಿದೆ. ಈಗಾಗಲೇ 6 ಕೆರೆಗಳು ನಿರ್ಮಾಣವಾಗಿವೆ.
ಬೆಳಗಾವಿಯಲ್ಲಿ 12, ಚಿಕ್ಕೋಡಿಯಲ್ಲಿ 36 ಹಾಗೂ ಬೈಲಹೊಂಗಲ,ಖಾನಾಪೂರ, ಹುಕ್ಕೇರಿ,ಸವದತ್ತಿ,ಗೋಕಾಕ್, ರಾಮದುರ್ಗ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಒಟ್ಟು 188 ಕೆರೆಗಳನ್ನು ಹೊಸದಾಗಿ ನಿರ್ಮಿಸಲು ಜಿಪಂ ಯೋಜನೆ ಹಾಕಿಕೊಂಡಿದೆ. ಆ ಪೈಕಿ ಮೊದಲ ಹಂತದಲ್ಲಿ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಬಳಿ 8 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಒಂದರ ಕೆಳಗೆ ಒಂದರಂತೆ (ಸಿರೀಸ್) ಆ ಪ್ರಕಾರ 6 ಕೆರೆಗಳನ್ನು ನಿರ್ಮಿಸಲಾಗಿದೆ.
ಇದರಿಂದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಹರಿದು ಹೋಗುತ್ತಿದ್ದ ಲಕ್ಷಾಂತರ ಲೀಟರ್ ನೀರಿನ ತಡೆಹಿಡಿಯುವ ಯೋಜನೆ ಇದಾಗಿದೆ. ಮಚ್ಛೆ ಗ್ರಾಪಂ ವ್ಯಾಪ್ತಿಯಲ್ಲಿ 317 ಎಕರೆ ಅರಣ್ಯ ಪ್ರದೇಶವಿದೆ. ಆದ್ರೆ, ಈ ಮೊದಲು ಒಂದೇ ಒಂದು ಕೆರೆ ಕೂಡ ಈ ಅರಣ್ಯ ಪ್ರದೇಶದಲ್ಲಿ ಇರಲಿಲ್ಲ.
ಇಲ್ಲಿನ ಮಂಗೇತ್ರಿ ನಾಲಾ ಹಾಗೂ ಅರಣ್ಯ ಪ್ರದೇಶದಿಂದ ಮಳೆಗಾಲದಲ್ಲಿ ಹರಿದು ಬರುವ ದೊಡ್ಡ ಪ್ರಮಾಣದ ನೀರು ಉಪಯೋಗಕ್ಕೆ ಬರುತ್ತಿರಲಿಲ್ಲ. ಹಾಗಾಗಿ ಹರಿದು ಹೋಗುವ ನೀರಿನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಕೆರೆಗಳನ್ನು ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
6 ಕೆರೆಗಳ ನಿರ್ಮಾಣಕ್ಕೆ 32 ಸಾವಿರ ಮಾನವ ದಿನ : ಮಚ್ಛೆ ಗ್ರಾಪಂ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿನ 6 ಕೆರೆಗಳ ನಿರ್ಮಸಲು ಕಂಗ್ರಾಳಿ ಬಿ.ಕೆ, ಮಚ್ಛೆ, ಪೀರನವಾಡಿ ಗ್ರಾಪಂಗಳ ಕೂಲಿಕಾರ್ಮಿಕರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. 6ಕೆರೆಗಳ ನಿರ್ಮಾಣಕ್ಕೆ 32 ಸಾವಿರ ಮಾನವ ದಿನಗಳಲ್ಲಿ ಕೆಲಸ ನಡೆದಿದ್ದು, ಒಟ್ಟು 90 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
ಈ ಮೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಅರಣ್ಯ ಪ್ರದೇಶವೂ ಇದೆ. ಈಗಾಗಲೇ ನರೇಗಾ ಯೋಜನೆಯಲ್ಲಿ ಗ್ರಾಮಗಳಲ್ಲಿ ಮಾಡಬೇಕಾದ ಬಹುತೇಕ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಕೂಲಿಕಾರರಿಗೆ ಲಾಕ್‍ಡೌನ್ ನಂತರ ಪೂರ್ಣ ಪ್ರಮಾಣದಲ್ಲಿ ಕೆಲಸ ಒದಗಿಸುವ ನಿಟ್ಟಿನಲ್ಲಿ ಬೆಳಗಾವಿ ತಾಲೂಕು ಪಂಚಾಯತ್‌ನಿಂದ ಅರಣ್ಯ ಪ್ರದೇಶದಲ್ಲಿ ಕೆರೆಗಳ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಇದಕ್ಕೆ ಕೂಲಿಕಾರರು ಕೂಡ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಹಾಗಾಗಿ ಇವತ್ತು 8 ಎಕರೆ ಪ್ರದೇಶದಲ್ಲಿ 6 ಕೆರೆಗಳು ನಿರ್ಮಾಣವಾಗಿವೆ.
3.20 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ : ಮಚ್ಛೆ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಲಾದ 6 ಕೆರೆಗಳು 3.20 ಲಕ್ಷ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿವೆ. ಈ ಕೆರೆಗಳು ಮಳೆಗಾಲದಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವ ನಿವಾರಿಸಲಿವೆ. ಇದರೊಂದಿಗೆ ಅರಣ್ಯ ಪ್ರದೇಶದಲ್ಲಿನ ಪಕ್ಷಿ-ಪ್ರಾಣಿಗಳ ಸಕುಲ ಬೆಳವಣಿಗೆಗೂ ಅನುಕೂಲವಾಗಲಿದೆ. ಈ ಅರಣ್ಯ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಲಿದೆ ಎನ್ನುತ್ತಾರೆ ಜಿಪಂ ಸಿಇಓ.
ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕೆರೆ ನಿರ್ಮಾಣ : ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕೆರೆಗಳ ನಿರ್ಮಾಣದಿಂದ ಕಾಡು,ಪ್ರಾಣಿ-ಪಕ್ಷಿಗಳ ಬೆಳವಣಿಗೆಗೆ ಸಹಕಾರಿ ಆಗಲಿದೆ. ಈ ರೀತಿ ಕೆರೆಗಳನ್ನು ನಿರ್ಮಾಣ ಕಾರ್ಯದಿಂದ ಅಂತರ್ಜಲ ಮಟ್ಟ ಹೆಚ್ಚಳ, ಹರಿಯುವ ಮಳೆಯ ನೀರಿನ ತಡೆಗೆ ಸಹಕಾರಿ ಆಗಲಿದೆ. ಅದಕ್ಕಾಗಿ ಜಿಪಂನಿಂದ ಇಡೀ ಜಿಲ್ಲೆಗೆ ನರೇಗಾ ಯೋಜನೆಯಡಿ ಹೊಸ ಕೆರೆಗಳ ನಿರ್ಮಾಣಕ್ಕೆ ಸಾವಿರಾರು ಎಕರೆ ಜಮೀನನ್ನು ತೆಗೆದುಕೊಂಡು ಹರಿಯುವ ನೀರನ್ನು ಇಂಗುವ ಹಾಗೇ ಮಾಡುವ ಯೋಜನೆಯನ್ನು ಜಿಲ್ಲಾ ಪಂಚಾಯತ್ ಸಿದ್ಧಪಡಿಸಿದೆ.
ಕೆರೆಗಳ ನಿರ್ಮಾಣದಿಂದ ಉಪಯೋಗವೇನು.?ಅತಿವೃಷ್ಠಿ-ಅನಾವೃಷ್ಠಿಗೆ ಕಡಿವಾಣ:ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಜುಲೈ,ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಮಳೆ ಆಗಿದ್ದು, ನೆರೆಹಾವಳಿಯಂತಹ ಅವಘಡಗಳು ಸಂಭವಿಸಿವೆ. ಪರಿಣಾಮ, ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೆರ್ ಭೂ ಪ್ರದೇಶದಲ್ಲಿ ಬೆಳೆಗಳು ಹಾಳಾಗಿವೆ. ರೈತರ ಬದುಕು ಬೀದಿಗೆ ಬಿದ್ದಿದೆ. ಕೆಲವರು ಮನೆಗಳನ್ನು ಕಳೆದುಕೊಂಡು ಈವರೆಗೂ ಪರಿಹಾರವಿಲ್ಲದೇ ದೇವಸ್ಥಾನಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಕೆರೆಗಳ ನಿರ್ಮಾಣದಿಂದ ಹರಿಯುವ ಮಳೆ ನೀರಿನ ಪ್ರಮಾಣ ಕಡಿಮೆ ಮಾಡಬಹುದು. ಇದರಿಂದ ರೈತರು ಬೆಳೆದ ಬೆಳೆಗಳು, ನೆರೆ ಹಾವಳಿಯಂತಹ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಹಾಗೂ ಸಣ್ಣ ಪ್ರಮಾಣದಲ್ಲಿ ತಡೆಗಟ್ಟಲು ಕೆರೆಗಳ ನಿರ್ಮಾಣ ಸಹಾಯಕವಾಗಲಿದೆ.
ಮಣ್ಣಿನ ಸವಕಳಿ ತಡೆಗೆ ಸಹಾಯಕ : ಮಳೆಗಾಲದಲ್ಲಿ ಸಂಭವಿಸುವ ಅತೀಯಾದ, ನಿರಂತರ ಮಳೆಯಿಂದಾಗಿ ರಭಸವಾಗಿ ಹರಿಯುವ ನೀರಿನಿಂದ ಭೂಮಿಯಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ಇದರಿಂದ ಗುಣಮಟ್ಟದ ಮಣ್ಣು ಸೇರಿದಂತೆ ಎಲ್ಲವೂ ಹರಿಯುವ ನೀರಿನಲ್ಲಿ ಹರಿದು ಸಮುದ್ರ,ನದಿಗಳನ್ನ ಸೇರುತ್ತದೆ. ಇದರಿಂದ ಜಮೀನಿನಲ್ಲಿ ಬೆಳೆದ ಬೆಳೆಗಳು ಉತ್ತಮ ಫಸಲು ನೀಡುವುದಿಲ್ಲ. ಹೀಗಾಗಿ ಹೊಸ ಕೆರೆಗಳ ನಿರ್ಮಾಣಗಳಿಂದ ನೀರಿನ ತೇವಾಂಶ ಹೆಚ್ಚಾಗಿ ಭೂಮಿಯ ಮೇಲೆ ಹುಲ್ಲು, ಗಿಡಮರಗಳು ಹೆಚ್ಚೆಚ್ಚು ಬೆಳೆಯುತ್ತವೆ. ಮಳೆ ನೀರು, ಹರಿಯುವ ನೀರನ್ನು ತಡೆದು ಇಂಗುವ ಹಾಗೇ ಮಾಡುತ್ತದೆ. ಆ ಕಾರಣಕ್ಕೆ ಕೆರಗಳು ಜಿಲ್ಲೆಗೆ ಅಷ್ಟೇ ಅಲ್ಲಾ ಇಡೀ ದೇಶಕ್ಕೆ ಒಳಿತನ್ನು ತರುತ್ತವೆ. ಸುತ್ತಮುತ್ತಲಿನ ಪರಿಸರ, ಅರಣ್ಯ ಅಳಿವು,ಉಳಿವು,ಬೆಳವಣಿಗೆಗೆ ಸಹಾಯಕವಾಗಲಿದೆ.
ಅಂತರ್ಜಲ ಮಟ್ಟ ಹೆಚ್ಚಳಕ್ಕೆ ವರದಾನ : ಪ್ರತಿವರ್ಷ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸುರಿಯುವ ನೀರನ್ನು ಸಂಗ್ರಹ ಮಾಡಿದ್ರೆ, ಜಲಕ್ಷಾಮ ಉಂಟಾಗೋದಿಲ್ಲ. ನೀರಿನ ಅಭಾವ ಕೂಡ ಉದ್ಭವಿಸೊಲ್ಲ. ಹೀಗಾಗಿ ಭವಿಷ್ಯದ ದೃಷ್ಠಿಯಿಂದ ಈಗಿನಿಂದಲೇ ನಾವು ಎಚ್ಚೆತ್ತುಕೊಳ್ಳದೇ ಹೋದ್ರೆ ಜನಸಂಖ್ಯೆ ಅನುಗುಣವಾಗಿ ಮುಂದೊಂದು ದಿನ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಅದೇ ಕಾರಣಕ್ಕೆ ಜಿಲ್ಲೆಯಲ್ಲಿ ಬೆಳಗಾವಿ ಜಿಪಂ ಸಿಇಓ ದರ್ಶನ ಎಚ್.ವಿ. ಅವರು ತಾವೇ ಸ್ವತಃ ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗಬಾರದೆಂದು ಕಾರಣಕ್ಕೆ ಸರ್ಕಾರದ ಜಲಾಮೃತ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಹೀಗಾಗಿ ಈಗಾಲೇ ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನು ತೆಗೆದುಕೊಂಡು ಕಾಯ್ದಿಟ್ಟ ಅರಣ್ಯ ಪ್ರದೇಶ ಸೇರಿ ಇತರೆಡೆ ಹೊಸ ಕೆರೆಗಳನ್ನು ನಿರ್ಮಾಣದ ಮೂಲಕ ಹರಿಯುವ ನೀರಿನ ತಡೆದು ಸಂಗ್ರಹಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ಜಿಪಂ ಅಂದುಕೊಂಡಂತೆ ಕೆರೆಗಳ ನಿರ್ಮಾಣವಾದ್ರೆ ಜಿಲ್ಲೆಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗಲ್ಲ ಎನ್ನುತ್ತಾರೆ ಸಿಇಒ ದರ್ಶನ್.ಲಾಕ್‍ಡೌನ್ ವೇಳೆ ಕೋಟ್ಯಂತರ ಕೂಲಿಕಾರರ ಕೈ ಹಿಡಿದಿದ್ದ ರಾಷ್ಟ್ರೀಯ ಮಹಾತ್ಮ ಗಾಂಧೀಜಿ ಉದ್ಯೋಗ ಖಾತರಿ ಯೋಜನೆ (ನರೇಗಾ) ಪರಿಸರ ಬೆಳವಣಿಗೆ ಹಾಗೂ ಅಂತರ್ಜಲ ಹೆಚ್ಚಳದಂತಹ ಯೋಜನೆಗಳಿಗೆ ಸಹಕಾರಿಯಾಗಿದೆ.
ಕೆರೆಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಹೊಸ ಕೆರೆಗಳ ಉಗಮಕ್ಕೆ ನರೇಗಾ ಯೋಜನೆ ಬಲ ನೀಡುತ್ತಿದೆ. ಜಿಲ್ಲೆಯಲ್ಲಿ 188 ಕೆರೆಗಳ ನಿರ್ಮಾಣದ ಗುರಿ ಇಟ್ಟುಕೊಂಡಿದ್ದು, ಯಾವುದೇ ರೀತಿ ಜೆಸಿಬಿ ವಾಹನ ಸೇರಿದಂತೆ ಮಷಿನ್ ವಸ್ತುಗಳನ್ನು ಬಳಸಿಕೊಂಡು ಕೆರೆ ನಿರ್ಮಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ, ಪರಿಸರ,ಅರಣ್ಯ ಬೆಳವಣಿಗೆ ಹಾಗೂ ಅಂತರ್ಜಲಮಟ್ಟ ಹೆಚ್ಚಳ ಸೇರಿದಂತೆ ಹಲವು ಉಪಯೋಗಗಳು ಈ ಯೋಜನೆಯಿಂದ ಆಗುತ್ತಿದ್ದು, ಬೆಳಗಾವಿ ಜಿಲ್ಲಾ ಪಂಚಾಯತ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.