ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಬ್ಲಾಕ್ ಫಂಗಸ್ ರೋಗಿಗಳಿಗೆ ಸಮರ್ಪಕ ಔಷಧಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಿಮ್ಸ್ ಸಿಬ್ಬಂದಿ ಪರ್ಯಾಯ ಔಷಧಿ ಬಳಕೆ ಮಾಡುತ್ತಿದ್ದು, ರೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಬ್ಲಾಕ್ ಫಂಗಸ್ ರೋಗಿಗಳಿಗೆ ಬಳಸುವ ಲಿಪೊಸೊಮಾಲ್ ಎಂಪೊಟೆರಿಸಿನ್-ಬಿ ಇಂಜೆಕ್ಷನ್ ಕೊರತೆ ಆಗಿದೆ. ಲಿಪೊಸೊಮಾಲ್ ಎಂಫೊಟೆರಿಸಿನ್-ಬಿ ಬದಲಿಗೆ ಲಿಪಿಡ್ ಕಾಂಪ್ಲೆಕ್ಸ್ ಎಂಪೊಟೆರಿಸಿನ್ ಬಳಕೆ ಮಾಡಲಾಗುತ್ತಿದೆ. ಪರ್ಯಾಯ ಔಷಧಿ ಬಳಕೆಯಿಂದ ರೋಗಿಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬಿಮ್ಸ್ ಪ್ರಭಾರಿ ನಿರ್ದೇಶಕ ಡಾ.ಉಮೇಶ್ ಕುಲಕರ್ಣಿ, ಲಿಪೊಸೊಮಾಲ್ ಎಂಫೊಟೆರಿಸಿನ್-ಬಿ ಪೂರೈಕೆಯಲ್ಲಿ ವ್ಯತ್ಯಯ ಆಗ್ತಿರುವುದು ನಿಜ. ಲಿಪೊಸೊಮಾಲ್ ಬದಲಿಗೆ ಲಿಪಿಡ್ ಕಾಂಪ್ಲೆಕ್ಸ್ ಬಳಕೆ ಮಾಡುತ್ತಿದ್ದೇವೆ. ಇದರಿಂದ ಅಷ್ಟೊಂದು ರಿಯಾಕ್ಷನ್ ಆಗ್ತಿಲ್ಲ. ಹಾಗೇನಾದರೂ ಕಂಡು ಬಂದರೆ ಪರ್ಯಾಯ ಚಿಕಿತ್ಸೆ ನೀಡುತ್ತಿದ್ದೇವೆ.
ಬಿಮ್ಸ್ ಆಸ್ಪತ್ರೆಯಲ್ಲಿ ಈವರೆಗೂ 243 ಬ್ಲಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ 67 ಬ್ಲಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 37 ಜನರು ಬ್ಲಾಕ್ ಫಂಗಸ್ ಸೋಂಕಿನಿಂದ ಮೃತರಾಗಿದ್ದು, ಉಳಿದಂತೆ 172 ಮಂದಿ ಸೋಂಕಿತರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನೂ 15 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದರು.
ಸೋಂಕಿತರಿಗೆ ಸೂಕ್ತ ಔಷಧಿ ಸಿಗದೆ ರಿಯ್ಯಾಕ್ಷನ್ ಆಗುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕ ಔಷಧಿ ಪೂರೈಕೆಗೆ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಕೆಲ ದಿನಗಳ ಹಿಂದೆ ಬಿಮ್ಸ್ ವಿಶೇಷ ಆಡಳಿತಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ರೋಗಿಗಳ ಸಂಬಂಧಿಕರು ಮನವಿ ಮಾಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.