ಬೆಳಗಾವಿ: ಕಳೆದ ಕೆಲ ದಿನಗಳ ಹಿಂದೆ ಉಂಟಾದ ಭೀಕರ ಪ್ರವಾಹಕ್ಕೆ ನಲುಗಿ ಹೋಗಿರುವ ಜಿಲ್ಲೆಯ ಜನರಿಗೆ ಮತ್ತೊಮ್ಮೆ ನೆರೆ ಬರುವ ಭಯ ಶುರುವಾಗಿದ್ದು, ಮಳೆಯ ಆರ್ಭಟದಿಂದ ತುಂಬಿ ಹರಿಯುತ್ತಿರಯುವ ನದಿಗಳು ಶಾಂತವಾಗಲೆಂದು ಮುತ್ತೈದೆಯರು ಪೂಜೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೆ ಜಾಸ್ತಿಯಾಗುತ್ತಿದೆ. ನದಿ ಪಾತ್ರದ ಜನರು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅನೇಕ ಗ್ರಾಮಗಳು ಮುಳುಗಡೆಯಾಗಿದ್ದು, ಜನರು ಬೀದಿಗೆ ಬಿದ್ದಿದ್ದಾರೆ. ಆದ್ದರಿಂದ ಸುರೇಬಾನ್ ಗ್ರಾಮದ ಮುತ್ತೈದೆಯರು ನದಿಗೆ ಅರಿಶಿನ ಕುಂಕುಮ ಹಾಕಿ ಪ್ರವಾಹ ಬಾರದಿರಲೆಂದು ಬೇಡಿಕೊಂಡಿದ್ದಾರೆ.
ಸುರೇಬಾನ್ ಗ್ರಾಮದ ಮಹಿಳೆಯರು ಹಾಗೂ ಮೈಲಾರದೇವ ಗೋರವಯ್ಯರಿಂದ ಮಲಪ್ರಭಾ ನದಿಗೆ ಪೂಜೆ ನೆರವೇರಿಸಲಾಗಿದೆ. ನದಿ ನೀರಿಗೆ ಸೀರೆ, ಹಸಿರು ಬಳೆ, ಬಾಳೆ ಹಣ್ಣು, ತೆಂಗಿನಕಾಯಿ, ಕುಂಕುಮ ಅರ್ಪಣೆ ಮಾಡಿದ್ದು, ಗಂಗಾ ಮಾತಾಗೆ ಆರತಿ ಬೆಳಗಿ ಪ್ರವಾಹ ಕಡಿಮೆ ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಭೀಕರ ಪ್ರವಾಹಕ್ಕೆ ಗ್ರಾಮದಲ್ಲಿ ನೂರಕ್ಕೂ ಅಧಿಕ ಮನೆಗಳು ನೆಲಸಮವಾಗಿದ್ದು, ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿದೆ. ಊರಿನ ಶಾಲೆ, ದೇವಸ್ಥಾನಗಳು ಹಾನಿಗೊಳಗಾಗಿದ್ದು, ಗ್ರಾಮ ಪಾಳುಬಿದ್ದಿದೆ.