ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಸಾಮಾಜಿಕ ಅಂತರ ಮರೆತು, ಸರಿಯಾಗಿ ಮಾಸ್ಕ್ ಕೂಡ ಧರಿಸದೆ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಕೋವಿಡ್ ಕರ್ಫ್ಯೂ ನಡುವೆಯೂ ನಿಗದಿತ ಅವಧಿಯಲ್ಲಿ ನಗರದ ಗಣಪತಿ ಗಲ್ಲಿ, ಖಡೇಬಜಾರ್, ಶನಿವಾರ ಪೇಟೆ, ಮೇನ್ ಮಾರ್ಕೆಟ್ ಹಾಗೂ ಹಣ್ಣಿನ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು. ಈ ಎಲ್ಲಾ ಮಾರುಕಟ್ಟೆಗಳಲ್ಲೂ ಅಗತ್ಯ ಸೇವೆಗಳ ಜೊತೆಗೆ ಅನಗತ್ಯವಾಗಿರುವ ಬಹುತೇಕ ಅಂಗಡಿ ಮುಂಗಟ್ಟುಗಳು ಪ್ರತಿನಿತ್ಯ ಓಪನ್ ಆಗುತ್ತವೆ. ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರಿಗೆ ಯಾರು ಹೇಳುವವರು, ಕೇಳುವವರು ಇಲ್ಲದಂತಾಗಿದ್ದು, ರಾಜಾರೋಷವಾಗಿ ನಡು ರಸ್ತೆಯಲ್ಲಿಯೇ ಬಟ್ಟೆ, ಚಪ್ಪಲಿ ಸೇರಿದಂತೆ ಎಂದಿನಂತೆ ವ್ಯಾಪಾರದಲ್ಲಿ ತೊಡಗುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಅಥವಾ ಪೊಲೀಸ್ ಸಿಬ್ಬಂದಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ರಂಜಾನ್ ಖರೀದಿ - ಲಾಕ್ಡೌನ್ ಭಯ: ಸೋಮವಾರದಿಂದ ರಾಜ್ಯ ಸಂಪೂರ್ಣ ಲಾಕ್ಡೌನ್ ಆಗಲಿದೆ. ಮೇ 14ರಂದು ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಇದ್ದು, ಲಾಕ್ಡೌನ್ ಆದರೆ ಅಗತ್ಯ ವಸ್ತುಗಳು ಸಿಗಲ್ಲ ಎಂಬ ಭಯದಿಂದ ಜನ ಈಗಲೇ ಖರೀದಿಗೆ ಮುಗಿಬಿದ್ದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಒಂದೆಡೆಯಾದರೆ, ಜನ ಕೂಡ ಸೋಂಕಿನ ಗಂಭೀರತೆ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಕಠಿಣ ನಿಯಮ ಜಾರಿಗೆ ತಂದರೂ ಯಾರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಬೇಕಾಬಿಟ್ಟಿ ಓಡಾಡ್ತಿದ್ದಾರೆ.
ಓದಿ : ಮೇ 24ರ ವರೆಗೆ ಲಾಕ್ಡೌನ್: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದ ಜನತೆ