ಬೆಳಗಾವಿ : ಗಡಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಮಧ್ಯೆ ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯಾ, ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದ ಜತೆಗೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ, ಚಿಕನ್ ಗುನ್ಯಾಗೆ ಚಿಕಿತ್ಸೆ ಪಡೆಯಲು ರೋಗಿಗಳು ಆಸ್ಪತ್ರೆಗಳಿಗೆ ಲಗ್ಗೆ ಇಡುತ್ತಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಮಳೆಗಾಲದ ಸಮಯದಲ್ಲಿ 15 ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಯ ಅಲಭ್ಯತೆಯ ಪರಿಣಾಮ ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೂರಕ್ಕೂ ಅಧಿಕ ಜನರು ಡೆಂಗ್ಯೂ, ಚಿಕನ್ ಗುನ್ಯ ಹಾಗೂ ಮಲೇರಿಯಾ ರೋಗಕ್ಕೆ ತುತ್ತಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ!
ಕೊರೊನಾ ಹಿನ್ನೆಲೆೆಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಈ ಎಲ್ಲ ಸಿಬ್ಬಂದಿಯನ್ನು ನಿಯೋಜಿಸಿದೆ. ಹೀಗಾಗಿ ಚರಂಡಿಗಳ ಸ್ವಚ್ಛತೆ, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸಾರ್ವಜನಿಕರೇ ಎಚ್ಛರ ವಹಿಸಬೇಕು!
ಕೊರೊನಾ ಹರಡದಂತೆ ಸಾರ್ವಜನಿಕರು ಎಚ್ಛರ ವಹಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಯಿಂದ ಮನೆ ಮುಂದೆ ನೀರು ನಿಲ್ಲುವುದರಿಂದ ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಮನೆ ಮುಂದೆ ನೀರು ನಿಲ್ಲದಂತೆ ಹಾಗೂ ಮನೆ ಸುತ್ತಮುತ್ತ ಸ್ಥಳೀಯರೇ ಸ್ವಚ್ಛತೆ ಕಾಪಾಡಬೇಕಿದೆ.