ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆೆ ಚುನಾವಣೆಯ ಕಣ ರಂಗೇರಿದೆ. ಬಿಜೆಪಿಯಿಂದ ಚುನಾವಣೆಗೆ ನಿಲ್ಲಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಪಕ್ಷವೇ ವಿಶೇಷತೆ ಎಂಬಂತೆ ಇದೇ ಮೊದಲ ಬಾರಿಗೆ ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ಟಾಸ್ಕ್ ಅನ್ನು ಮುಂದಿಟ್ಟಿದೆ.
58 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ನಿಂದಲೂ 10 ರಿಂದ 15 ಆಕಾಂಕ್ಷಿಗಳು ಕಮಲ ಹಿಡಿಯಲು ಮುಂದಾಗಿದ್ದಾರೆ. ಇದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಅಭ್ಯರ್ಥಿ ಆಯ್ಕೆಗೆ ಕೇಸರಿ ನಾಯಕರು ಸಂದರ್ಶನದ ಮೊರೆ ಹೋಗಿದ್ದಾರೆ.
ನಗರದ ಮಹಾವೀರ ಭವನದಲ್ಲಿ ಬಿಜೆಪಿ ಟಿಕೆಟ್ಗೆ ಪೈಪೋಟಿ ನಡೆಸುತ್ತಿರುವ ಆಕಾಂಕ್ಷಿಗಳನ್ನು ಆಯ್ಕೆ ಮಾಡಲು 6 ಟೇಬಲ್ಗಳಲ್ಲಿ ಸಂದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಇಂಟರ್ವ್ಯೂವ್ ನಡೆಸಲಾಗುತ್ತಿದೆ. ಜೊತೆಗೆ ಈಗಾಗಲೇ ಆಯ್ಕೆ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದು, ಇನ್ನೂ ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಕೆ ಜೊತೆಗೆ ಸಂದರ್ಶನ ನಡೆಸಲಾಗುತ್ತಿದೆ. ಇದಾದ ಬಳಿಕ ಇಂದು ಸಂಜೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಈ ಬಾರಿ ಪಾಲಿಕೆ ಚುನಾವಣೆಯಲ್ಲಿ 45 ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಗೆಲ್ಲಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ.
ಈ ಕುರಿತು ಮಾತನಾಡಿದ ಶಾಸಕ ಅನಿಲೆ ಬೆನಕೆ, ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆಗೆ ಬೇರೆ ಬೇರೆ ಪಕ್ಷದ ಮುಖಂಡರು ಸಹ ಟಿಕೆಟ್ ಕೇಳುತ್ತಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆ ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆ ಸಂದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದೂ ಕೂಡ ಸಂದರ್ಶನ ನಡೆಯಲಿದ್ದು, ಸಂಜೆ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದರು.