ಬೆಳಗಾವಿ: ಜಿಲ್ಲೆಯ 18 ಶಾಸಕರ ಪೈಕಿ 13 ಬಿಜೆಪಿ ಶಾಸಕರನ್ನು ಹೊಂದಿರುವ ಬಿಎಸ್‌ವೈ ಸರ್ಕಾರ ಕುಂದಾನಗರಿಗೆ ಭರ್ಜರಿ ಗಿಫ್ಟ್ ನೀಡುತ್ತಿದ್ದು, ಬೆಂಗಳೂರು ಹೊರತ್ತುಪಡಿಸಿದರೆ, ನಂತರ ಸ್ಥಾನದಲ್ಲಿ ರಾಜಕೀಯ ಶಕ್ತಿ ಕೇಂದ್ರವಾಗುತ್ತಿದೆ.
ಇತ್ತೀಚೆಗೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರನ್ನು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ, ಸಿಎಂ ಬಿಎಸ್‌ವೈ ಆಪ್ತ ಡಾ.ವಿ.ಐ ಪಾಟೀಲ ಅವರನ್ನು ಎಣ್ಣೆ, ಬೀಜ ಮಹಾಮಂಡಳಿ ಅಧ್ಯಕ್ಷ ಹಾಗೂ ರಾಮತೀರ್ಥನಗರದ ಅಣ್ಣಾಸಾಹೇಬ ದೇಸಾಯಿ ಅವರನ್ನು ಹೆಸ್ಕಾಂ ನಿಗಮದ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರ ಜಿಲ್ಲೆಗೆ ದೊಡ್ಡ ಕೊಡುಗೆ ಕೊಟ್ಟಿದೆ.
ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಕಿತ್ತೂರು, ಸವದತ್ತಿ, ರಾಮದುರ್ಗ, ಗೋಕಾಕ್, ಅರಬಾವಿ, ರಾಯಬಾಗ, ಕುಡಚಿ, ನಿಪ್ಪಾಣಿ, ಹುಕ್ಕೇರಿ, ಅಥಣಿ, ಕಾಗವಾಡ ಸೇರಿ, ಜಿಲ್ಲೆಯಲ್ಲಿ ಒಟ್ಟು 13 ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಬಿಜೆಪಿ ಸಂಸದರ ಪೈಕಿ ಸುರೇಶ ಅಂಗಡಿಯವರ ಅಕಾಲಿಕ ನಿಧನದಿಂದ ಓರ್ವ ಬಿಜೆಪಿ ಸಂಸದರಿದ್ದಾರೆ. ಇದರ ಜೊತೆಗೆ ಜಿಲ್ಲೆಯಿಂದ ಓರ್ವ ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ಹೊಂದಿದೆ.
ವಿಧಾನಸಭೆಗೆ ಗೋಕಾಕ್ನ ರಮೇಶ್ ಜಾರಕಿಹೊಳಿ, ನಿಪ್ಪಾಣಿಯ ಶಶಿಕಲಾ ಜೊಲ್ಲೆ, ಕಾಗವಾಡದ ಶ್ರೀಮಂತ ಪಾಟೀಲ್, ವಿಧಾನಪರಿಷತ್ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಸೇರಿ ರಾಜ್ಯ ಸಂಪುಟದಲ್ಲಿ ಜಿಲ್ಲೆಯಿಂದ ನಾಲ್ವರು ಪ್ರಭಾವಿ ಸಚಿವರಿದ್ದಾರೆ. ಮಾಜಿ ಸಚಿವ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಬಿಜೆಪಿ ಪಕ್ಷದಲ್ಲಿ ತಮ್ಮದೇ ಆದ ಹಿಡಿತ ಸಾಧಿಸುತ್ತಿದ್ದಾರೆ. ಇನ್ನು, ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಮಹಾಂತೇಶ ಕವಟಗಿಮಠ ಇದ್ದರೆ, ವಿಧಾನಸಭೆ ಉಪ ಸ್ಪೀಕರ್ ಆಗಿ ಸವದತ್ತಿ ಶಾಸಕ ಆನಂದ ಮಾಮನಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಾಧ್ಯಾಪಕ ಸಾಬಣ್ಣ ತಳವಾರ ಅವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವ ಮೂಲಕ ಜಿಲ್ಲೆಗೆ ಹೆಚ್ಚುವರಿಯಾಗಿ ಒಂದು ಸ್ಥಾನ ದಕ್ಕುವಂತೆ ಮಾಡಲಾಗಿದೆ. ಇದರಿಂದ ಬೆಂಗಳೂರು ಬಳಿಕ ಬೆಳಗಾವಿ ಎರಡನೇ ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ನಿಗಮ ಮಂಡಳಿಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಈ ಮೊದಲು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಬೆಳಗಾವಿ ನಗರದ ಮುಕ್ತಾರ್ ಪಠಾಣ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕುಡಚಿ ಶಾಸಕ ಪಿ.ರಾಜು, ವಿಧಾನ ಸಭೆಯ ಲೆಕ್ಕಪತ್ರ ಅಂದಾಜು ಸಮಿತಿ ಅಧ್ಯಕ್ಷರಾಗಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್, ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿಯಾಗಿ ಶಂಕರಗೌಡ ಪಾಟೀಲ್, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಪ್ತ ಘೂಳಪ್ಪ ಹೊಸಮನಿ, ಅಥಣಿ ಶಾಸಕ ಮಹೇಶ ಕುಮಠಳ್ಳಿಗೆ ಕೊಳಗೇರಿ ನಿಗಮ ಮಂಡಳಿ ಸ್ಥಾನ ನೀಡಿದ್ದರು. ಇದರ ಜೊತೆಗೆ ದೀಪಾ ಕುಡಚಿಯವರನ್ನು ಜಲಮಂಡಳಿ ನಾಮನಿರ್ದೇಶಕ ಸದಸ್ಯತ್ವ ಸ್ಥಾನಕ್ಕೆ ನೇಮಕ ಮಾಡಿದ್ದರು. ಒಟ್ಟಾರೆ ಜಿಲ್ಲೆಯ 13 ಜನ ಶಾಸಕರ ಪೈಕಿ, 9 ಜನರು ಸರ್ಕಾರದಲ್ಲಿ ಸಚಿವ, ನಿಗಮ ಮಂಡಳಿ ಸೇರಿ ಮಹತ್ವ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.