ಬೆಳಗಾವಿ : ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರುವ ಹಿನ್ನೆಲೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ನಾಯಕರು, ನಿರ್ದೇಶಕರ ಮತ್ತು ನಾಯಕರ ಸಭೆ ನಡೆಸುತ್ತಿದ್ದು, ಅವಿರೋಧ ಆಯ್ಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ನಗರದ ನ್ಯೂ ಸರ್ಕ್ಯೂಟ್ ಹೌಸ್ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆಗೆ ಕೆಲ ನಿರ್ದೇಶಕರ ವಿರೋಧ ಇರುವ ಹಿನ್ನೆಲೆ ಡಿಸಿಎಂ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ ಕತ್ತಿ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಕತ್ತಿ ಬ್ರದರ್ಸ್, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಹಾಗೂ ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿ, ಶಾಸಕ ಮಹಾಂತೇಶ್ ದೊಡ್ಡಗೌಡರ, ಮಾಜಿ ಶಾಸಕ ಅರವಿಂದ್ ಪಾಟೀಲ್ ಸೇರಿ ಬ್ಯಾಂಕ್ನ ನಿರ್ದೇಶಕರು ಭಾಗಿಯಾಗಿದ್ದಾರೆ.
ಸದ್ಯ ನಡೆಯುತ್ತಿರುವ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಯಾರಾಗಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದ್ದು, ಅವಿರೋಧ ಆಯ್ಕೆಗೆ ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ, ಹಾಲಿ ಅಧ್ಯಕ್ಷ ರಮೇಶ್ ಕತ್ತಿಯವರನ್ನು ಅಧ್ಯಕ್ಷ ಮಾಡುವುದು ಬೇಡ ಎಂದು ಕೆಲ ನಿರ್ದೇಶಕರಿಂದ ಒತ್ತಡ ಬರುತ್ತಿದೆ. ಹೀಗಾಗಿ, ಈಗಿನ ಸಭೆಯಲ್ಲಿ ಎಲ್ಲಾ ನಿರ್ದೇಶಕರನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವೊಲಿಸುತ್ತಿದ್ದಾರೆ ಎನ್ನಲಾಗಿದೆ.