ಬೆಳಗಾವಿ: ವರದಕ್ಷಿಣೆಗಾಗಿ ಪೀಡಿಸಿ ನಿತ್ಯವೂ ನರಕತೋರಿಸುತ್ತಿದ್ದ ಗಂಡ ಮತ್ತು ಅವನ ಮನೆಯವರು, ಹೆಂಡತಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಕೊಡಬಾರದ ಕಿರುಕುಳ ಕೊಟ್ಟು ಕ್ರೂರವಾಗಿ ಕೊಂದಿದ್ದಾರೆ ಎನ್ನಲಾದ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.
ಧಾರವಾಡ ತಾಲೂಕಿನ ಹೊಸವಾಳ ಗ್ರಾಮದ ಅಶ್ವಿನಿ ಎಂಬಾಕೆಯನ್ನು ಕಳೆದ ಐದು ತಿಂಗಳ ಹಿಂದೆ ಅಂದರೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಸ್ಕೇನಹಟ್ಟಿ ಗ್ರಾಮದ ರಾಮು ಬೆಂಡಿಗೇರಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಲಾಕ್ ಡೌನ್ ಇದ್ದ ಕಾರಣ ಮೇ 15ರಂದು ಸರಳವಾಗಿ ವಿವಾಹ ನೆರವೇರಿತ್ತು.
ಇನ್ನೂ ಗಂಡನ ಮನೆಯವರು ಹೇಳಿದಷ್ಟು ವರದಕ್ಷಿಣಿ ಕೊಟ್ಟು ಅಶ್ವಿಯನಿಯ ಮದುವೆ ಮಾಡಿಕೊಡಲಾಗಿತ್ತು. ಆದರೂ ವರದಕ್ಷಿಣೆ ಸಾಲುವುದಿಲ್ಲ ಇನ್ನೂ ಒಂದು ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಲಾರಂಭಿಸಿದ್ದರಂತೆ. ಮುಂದೆ ಸಾಧ್ಯವಾದಾಗ ಕೊಡುವುದಾಗಿ ಅಶ್ವಿನಿ ತಂದೆತಾಯಿ ಕೇಳಿಕೊಂಡರೂ ಅದ್ಯಾವುದಕ್ಕೂ ಕ್ಯಾರೆ ಎನ್ನದ ಗಂಡ, ನಿತ್ಯ ಕುಡಿದು ಬಂದು ಹೆಂಡತಿ ಜೊತೆಗೆ ಜಗಳಕ್ಕಿಳಿವುದು, ಕಿರುಕುಳ ನೀಡುವುದು ಮಾಡಿದ್ದಾನೆ. ಹೀಗೆ ಮೂರ್ನಾಲ್ಕು ತಿಂಗಳು ಸುಮ್ಮನಿದ್ದ ಅಶ್ವಿನಿ ವರದಕ್ಷಿಣೆ ತರಲು ಒಪ್ಪದಿದ್ದದ್ದಕ್ಕೆ ಕುಪಿತಗೊಂಡ ಗಂಡ ಮತ್ತು ಆತನ ಕುಟುಂಬಸ್ಥರು ಕಳೆದ ಒಂದು ವಾರದ ಹಿಂದೆ ಅಶ್ವಿನಿಯನ್ನು ಕೊಂದೇ ಬಿಟ್ಟಿದ್ದಾರೆ ಎಂದು ಅಶ್ವಿನಿ ತಾಯಿ ಆರೋಪಿಸಿದ್ದಾರೆ.
ಒಂದು ವಾರದ ಹಿಂದೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಗಂಡ ರಾಮು ಮತ್ತು ಆತನ ಸಹೋದರಿ ಜ್ಯೋತಿಬಾ, ತಂದೆ ಗಂಗಾಧರ್, ನಾದಿನಿ ಸುನಿತಾ ಸೇರಿಕೊಂಡು ಮೊದಲು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಬೆಳಗಿನಜಾವ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವಂತೆ ಬಿಂಬಿಸುವ ಕೆಲಸ ಮಾಡಿದ್ದಾರೆ. ಶವವನ್ನ ಮನೆಯ ಹಿತ್ತಲಿನ ಕಸದಲ್ಲಿ ಎಸೆದು ಅಶ್ವಿನಿ ತಂದೆಗೆ ಕರೆ ಮಾಡಿ ಮನೆಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿದೆ ನಿಮ್ಮ ಮಗಳು ಸತ್ತಿದ್ದಾಳೆ ಎಂದು ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಯುವತಿಯ ಕುಟುಂಬಸ್ಥರು ಸ್ಥಳದಲ್ಲಿ ಅರ್ಧಂಬರ್ಧ ಸುಟ್ಟ ಮಗಳ ಶವ ನೋಡಿ ಸಂಶಯ ಬಂದು ಅಕ್ಕಪಕ್ಕದ ಜನರಿಗೆ ಕೇಳಿದಾಗ ಮಗಳು ಕೊಲೆಯಾಗಿರುವುದು ಗೊತ್ತಾಗಿದೆ.
ಕೂಡಲೇ ನಂದಗಡ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿ ನಾಲ್ಕೂ ಜನರ ವಿರುದ್ದ ದೂರು ನೀಡಿದ್ದಾರೆ. ಇತ್ತ ಅದೇ ಗ್ರಾಮದಲ್ಲಿ ಮಗಳ ಅಂತ್ಯಸಂಸ್ಕಾರ ಮಾಡಿದ್ದಾರೆ. ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಗಂಡನೊಬ್ಬನನ್ನೇ ಬಂಧಿಸಿ ಉಳಿದವರನ್ನ ಬಿಟ್ಟು ಕಳುಹಿಸಿದ್ದಾರೆ. ಇದರಿಂದ ಪೊಲೀಸರ ನಡೆ ಮೇಲೆ ಕೂಡ ಅನುಮಾನ ವ್ಯಕ್ತ ಪಡಿಸುತ್ತಿರುವ ಕುಟುಂಬಸ್ಥರು, ನಾಲ್ಕು ಜನ ಸೇರಿಕೊಂಡು ಕೊಲೆ ಮಾಡಿದ್ರೂ ಗಂಡನನ್ನ ಮಾತ್ರ ಬಂಧಿಸಿದ್ದಾರೆ. ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೇ ಆ ಎಲ್ಲರೂ ಅರೆಸ್ಟ್ ಆಗಿ ನಾಲ್ಕು ಜನರಿಗೆ ಗಲ್ಲು ಶಿಕ್ಷೆಯಾಗಲಿ ಅಂತಾ ಆಗ್ರಹಿಸುತ್ತಿದ್ದಾರೆ.