ಬೆಳಗಾವಿ: ಅಪಹರಣಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮದನಕುಮಾರ್ ಭೈರಪ್ಪನವರ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅಪಹರಣಕಾರರು ಉದ್ಯಮಿ ಬಳಿಯಿದ್ದ ಹಣ, ಬಂಗಾರದ ಚೈನು ಸೇರಿದಂತೆ ಇತರ ವಸ್ತುಗಳನ್ನು ಕಸಿದುಕೊಂಡು ಖಾಲಿ ಪತ್ರಗಳಿಗೆ ಸಹಿ ಮಾಡಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ಈ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ತೆರಳಿದ ಮಾಳಮಾರುತಿ ಪೊಲೀಸರು ಮದನಕುಮಾರ್ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಪ್ರಾಥಮಿಕ ತನಿಖೆ ನಡೆಸಿ, ಆರೋಗ್ಯ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ಬೆಳಗ್ಗೆ ಉದ್ಯಮಿಯನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು:
ಮದನಕುಮಾರ್ ಬೈರಪ್ಪನವರರು ಶಿವಬಸವ ನಗರದ ನಿವಾಸಿಯಾಗಿದ್ದು, ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಮನೆಯಿಂದ ಕಣಬರ್ಗಿ ಬಳಿಯ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಐದಾರು ಜನರ ಗುಂಪೊಂದು ಕಣಬರ್ಗಿ ರಸ್ತೆಯಲ್ಲಿರುವ ಶೃತಿ ಅಪಾರ್ಟ್ಮೆಂಟ್ ಬಳಿ ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದರು. ಈ ಸಂಬಂಧ ಮದನಕುಮಾರ್ ಕುಟುಂಬಸ್ಥರು ಮಾಳ ಮಾರುತಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡಿರುವ ಪೊಲೀಸರು ಅಪಹರಣಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದರು.
ಮದನಕುಮಾರ್ ಹಿನ್ನೆಲೆ:
ಬೆಳಗಾವಿಯ ನಿವಾಸಿ ಆಗಿರುವ ಮದನ್ ಕುಮಾರ್ ಬೈರಪ್ಪನವರು ಬೆಳಗಾವಿಯಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಒಡೆತನದಲ್ಲಿ ಶೃತಿ ಕನ್ಸಟ್ರಕ್ಷನ್ಸ್ , ಶೃತಿ ಲೇಔಟ್, ಶೃತಿ ಅಪಾರ್ಟ್ಮೆಂಟ್ ಸೇರಿದಂತೆ ಇತರ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು, ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮದೇ ಆಗಿರುವ ಹೆಸರು ಮಾಡಿಕೊಂಡಿದ್ದಾರೆ.
ಓದಿ: ಬೈಕ್ ನಿಲ್ಲಿಸಿ ನದಿಗೆ ಹಾರಿದ; ಕೊಳ್ಳೇಗಾಲದಲ್ಲಿ ತಮ್ಮನ ಕಣ್ಮುಂದೆಯೇ ಅಣ್ಣನ ಆತ್ಮಹತ್ಯೆ..!