ಬೆಳಗಾವಿ: ಇಂದು ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಸ್ತಿ ಕರ ಹೆಚ್ಚಳ ವಿಚಾರದಲ್ಲಿ ಸಾಕಷ್ಟು ಸದ್ದು ಗದ್ದಲ ನಡೆಯಿತು. ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಪಾಲಿಕೆ ಸಾಕ್ಷಿಯಾಯಿತು. ಪಾಲಿಕೆ ಆಯುಕ್ತರ ವಿರುದ್ಧ 2024/25ನೇ ಸಾಲಿಗೆ ಆಸ್ತಿ ಕರ ಹೆಚ್ಚಿಸುವ ಠರಾವು ತಿರುಚಿದ್ದಿರಿ ಎಂದು ಆಡಳಿತ ಸದಸ್ಯರು ಆರೋಪಿಸಿದರೆ, ಇದಕ್ಕೆ ಮೇಯರ್ ಅವರು ಕೂಡ ಸಹಿ ಮಾಡಿದ್ದಾರಲ್ಲ ಎಂದು ವಿಪಕ್ಷ ಸದಸ್ಯರು ಹರಿಹಾಯ್ದರು.
ಹೌದು ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳವೇ ಪ್ರಮುಖವಾಗಿ ಚರ್ಚೆಯಾಯಿತು ಎರಡೂ ಕಡೆ ಸದಸ್ಯರು ಸ್ವಯಂ ಪ್ರತಿಷ್ಟೆಯಾಗಿ ಈ ವಿಷಯ ತೆಗೆದುಕೊಂಡಿದ್ದರು. ಆಯುಕ್ತ ಅಶೋಕ ದುಡಗುಂಟಿ ಸದಸ್ಯರ ದಿಕ್ಕು ತಪ್ಪಿಸಿ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ ನಡೆಸಬೇಕು ಎಂದು ಆರಂಭದಲ್ಲಿ ಆಡಳಿತಾರೂಢ ಸದಸ್ಯರು ಆಗ್ರಹಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರಕ್ಕೆ ತಪ್ಪು ಮಾಹಿತಿ:ಶಾಸಕ ಅಭಯ ಪಾಟೀಲ ಮಾತನಾಡಿ, ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸರಕಾರಕ್ಕೆ ತಪ್ಪು ಮಾಹಿತಿ ಹೋಗಿದೆ. ತಪ್ಪು ಮಾಹಿತಿ ನೀಡಿದ್ದು, ಅಧಿಕಾರಿಗಳಾಗಿದ್ದರೂ ಸಹಿ ಮಾಡಿರುವುದು ಪಾಲಿಕೆ ಆಯುಕ್ತರು, ನೀವು ಸಭೆಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಈ ವಿಷಯವನ್ನೇ ಮುಂದಿಟ್ಟುಕೊಂಡು ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಹೊರಟಿದೆ. ಎಲ್ಲ ಸದಸ್ಯರು ಆರು ತಿಂಗಳಲ್ಲಿ ಮಾಜಿ ಆಗುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಆಸೀಫ್ ಸೇಠ್, ಒಂದೂವರೆ ವರ್ಷಗಳ ಕಾಲ ಪಾಲಿಕೆ ಸದಸ್ಯರಿಗೆ ಅಧಿಕಾರ ಸ್ವೀಕರಿಸದಂತೆ ಮಾಡಿದ್ದು, ನಿಮ್ಮ ಸರಕಾರದ ಅವಧಿಯಲ್ಲಿ ಎಂದು ಚಾಟಿ ಬೀಸಿದರು. ಇನ್ನು ಮೇಯರ್ಗೆ ಕನ್ನಡ ಬರದಿದ್ದರೂ ಅವರ ಆಪ್ತ ಕಾರ್ಯದರ್ಶಿ ಇರುತ್ತಾರೆ. ಅವರು ತಮ್ಮ ಗಮನಕ್ಕೆ ತಂದಿಲ್ಲವೇ ಎಂದು ಸದಸ್ಯ ಅಜೀಂ ಪಟ್ವೇಗಾರ್ ಪ್ರಶ್ನಿಸಿದಾಗ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಸೂಪರ್ ಸೀಡ್ ಮಾಡುವ ಪ್ರಶ್ನೆ ಇಲ್ಲ:ಆಯುಕ್ತ ಅಶೋಕ ದುಡಗುಂಟಿ ಮಾತನಾಡಿ, ಕಳೆದ ಜೂನ್ ಕೊನೆಯ ವಾರದಲ್ಲಿ ಪಾಲಿಕೆ ಆಯುಕ್ತನಾಗಿ, ವರದಿ ಮಾಡಿಕೊಂಡಿರುವೆ. 21-9-2023ಕ್ಕೆ ಪೌರಾಡಳಿತ ನಿರ್ದೇಶಕರು. 2021-22ನೇ ಸಾಲಿನ ತೆರಿಗೆ ಸಂಗ್ರಹ ಮಾಡದಿರುವ ಕುರಿತು ಪತ್ರ ಬರೆದಿದ್ದಾರೆ. ಕಂದಾಯ ಇಲಾಖೆಯ ಉಪ ಆಯುಕ್ತರಿಗೆ ಪತ್ರ ಕಳುಹಿಸಿದ್ದೆನು. ನನಗೆ ಪತ್ರ ಬಂದಿದ್ದು 5-10-2023ಕ್ಕೆ ಬಂದಿದೆ.
2021-22ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಮಾಡದೇ ಇರುವುದಕ್ಕೆ ಸರಕಾರಕ್ಕೆ ಪತ್ರ ಸಲ್ಲಿಸಲಾಗಿದೆ. 2023-24ಕ್ಕೆ ಸಂಬಂಧಿಸಿದಂತೆ ತೆರಿಗೆ ಸಂಗ್ರಹಿಸಲು ಪಾಲಿಕೆಯ ನಿರ್ಧಾರದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ತಾಂತ್ರಿಕ ದೋಷ ದಿಂದ 2024-25ರ ತೆರಿಗೆ ಎಂದಾಗಿದೆ. ಇದನ್ನು ಸರಕಾರಕ್ಕೆ ಪುನಃ ಪತ್ರ ಬರೆಯಲಾಗಿದೆ. ಆದರೆ ಪಾಲಿಕೆ ಸೂಪರ್ ಸೀಡ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಊಟದ ಬಳಿಕ ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಗಮಿಸಿದರು. ಈ ವೇಳೆ, ಮಾತನಾಡಿದ ಆಡಳಿತ ಸದಸ್ಯ ಸಂದೀಪ ಜೀರಗ್ಯಾಳ, ಯುಪಿಎಸ್ಸಿ ಮತ್ತು ನಗರಾಭಿವೃದ್ಧಿ ಇಲಾಖೆಗೆ ಆಯುಕ್ತರ ವಿರುದ್ಧ ತನಿಖೆ ನಡೆಸಲು ಠರಾವ್ ಪಾಸ್ ಮಾಡುವಂತೆ ಮೇಯರ್ಗೆ ಒತ್ತಾಯಿಸಿದರು.
ತನಿಖೆಗೆ ಸಚಿವರ ಆಗ್ರಹ: ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ಎಲ್ಲರಿಗೂ ತನಿಖೆ ಆಗುವುದೇ ಬೇಕಿದೆ. ಸಿಒಡಿ, ಸಿಐಡಿ ತನಿಖೆ ಆಗಬೇಕಾ ಎಂದು ನಿರ್ಧರಿಸಬೇಕು. ಮೇಯರ್ ಸಹಿ ಯಾರು ಮಾಡಿದ್ದಾರೆ..? 2023/24 ಯಾರು ತಿದ್ದಿದ್ದಾರೆ ಎಂಬುದು ತಿಳಿಯಬೇಕಿದೆ. ಸುಮ್ಮನೇ ವ್ಯರ್ಥ ಚರ್ಚೆ ಮಾಡದೇ ಠರಾವ್ ಪಾಸ್ ಮಾಡಬೇಕು. ಸರ್ಕಾರಕ್ಕೆ ತಪ್ಪು ಮಾಹಿತಿ ಕಳಿಸಿದವರ ವಿರುದ್ಧ ತನಿಖೆ ಆಗಲಿ ಎಂದು ಆಗ್ರಹಿಸಿದರು.
ಕೊನೆಗೆ ಮೇಯರ್ ಶೋಭಾ ಸೋಮನಾಚೆ ಅವರು ತನಿಖೆಗೆ ಒಪ್ಪಿಗೆ ಸೂಚಿಸಿದರು. ನಂತರ ಇನ್ನಿತರ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಶಾಸಕ ಆಸೀಫ್ ಸೇಠ್ ಎದ್ದು ನಿಲ್ಲುತ್ತಿದ್ದಂತೆ ಸಭೆಯನ್ನು ಮೊಟಕುಗೊಳಿಸಿ ರಾಷ್ಟ್ರಗೀತೆ ಶುರು ಮಾಡಿದರು. ಇನ್ನು ಮಾತಾಡುವ ವಿಷಯ ಇರುವಾಗಲೇ ಯಾಕೆ ರಾಷ್ಟ್ರಗೀತೆ ಶುರು ಮಾಡಿದಿರಿ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಗಲಾಟೆ ಮಾಡಿದರು. ಗಲಾಟೆ ನಡುವೆಯೇ ಸಭೆ ಮುಕ್ತಾಯವಾಯಿತು.
ಇದನ್ನೂಓದಿ:'ನನ್ನ ಮೌನವೂ ವೀಕ್ನೆಸ್ ಅಲ್ಲ': ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್