ಬೆಳಗಾವಿ: ದಿ. ಸುರೇಶ ಅಂಗಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಸಿಎಂ ಬಿ.ಎಸ್. ಯಡಿಯೂರಪ್ಪನವರಿಂದು ನಗರಕ್ಕೆ ಆಗಮಿಸಿದ್ದರು. ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೇನು ಕೆಲವೇ ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ.
ಸುರೇಶ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದ್ದಾರೆ. ಉಪಚುನಾವಣೆ ಟಿಕೆಟಿಗಾಗಿ ಆಕಾಂಕ್ಷಿಗಳು ಲಾಬಿಗೆ ಮುಂದಾಗಿದ್ದಾರೆ. ಇಂದು ಸಿಎಂ ನಗರಕ್ಕೆ ಬರುತ್ತಿದ್ದಂತೆ ಆಕಾಂಕ್ಷಿಗಳು ಸಿಎಂ ಬೆನ್ನಿಗೆ ಬಿದ್ದಿದ್ದರು. ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿದ ನಂತರ ಸಿಎಂ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದರು.
ಉಪಚುನಾವಣೆ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳು ಸಿಎಂ ಭೇಟಿ ನೀಡಿ ಟಿಕೆಟ್ಗಾಗಿ ಲಾಬಿ ನಡೆಸಿದರು. ಮಾಜಿ ಶಾಸಕ ಸಂಜಯ್ ಪಾಟೀಲ್, ಜಗದೀಶ್ ಮೆಟಗುಡ್ಡ, ಎಂಬಿ ಝಿರಲಿ, ರಾಜು ಚಿಕ್ಕನಗೌಡರ, ಡಾ. ಸೋನಾಲಿ ಸೋರ್ನಬತ್, ದೀಪಾ ಕುಡಚಿ ಸೇರಿದಂತೆ ಹಲವು ಮುಖಂಡರು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು. ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡದಿದ್ದರೆ ನಮ್ಮ ಹೆಸರು ಪರಿಗಣಿಸುವಂತೆ ಆಕಾಂಕ್ಷಿಗಳು ಮನವಿ ಮಾಡಿದರು.