ಬೆಳಗಾವಿ: ಮೊದಲು ಎತ್ತುಗಳು ರೈತನ ಜೀವನಾಡಿ ಆಗಿದ್ದವು. ಆದರೆ, ಕಾಲ ಬದಲಾದಂತೆ ಈಗ ಬೈಕ್ ರೈತನ ಜೀವನಾಡಿಯಾಗಿದೆ. ಹೌದು ಎತ್ತುಗಳ ಕೊರತೆಯಿಂದಾಗಿ ಬೈಕ್ ಮೂಲಕ ತಮ್ಮ ಹೊಲದಲ್ಲಿ ಎಡೆಕುಂಟೆ ಹೊಡೆಯುವ ಮೂಲಕ ಇಲ್ಲೊಬ್ಬ ರೈತ ಮಾದರಿಯಾಗಿದ್ದಾರೆ.
ಹೌದು ಸವದತ್ತಿ ತಾಲೂಕಿನ ಚಚಡಿ ಗ್ರಾಮದ ರೈತ ಮಹಾಂತೇಶ ಮಹಾದೇವಪ್ಪ ಮತ್ತಿಕೊಪ್ಪ ಎಂಬುವವರೇ ಈ ರೀತಿಯ ವಿನೂತನ ಪ್ರಯತ್ನಕ್ಕೆ ಮುಂದಾದವರು. ತಮ್ಮ ಮೂರು ಎಕರೆ ಹೊಲದಲ್ಲಿ ಗೋವಿನಜೋಳ ಬೆಳೆದಿರುವ ರೈತ ಮಹಾಂತೇಶ, ಬೈಕಿನ ಹಿಂದೆ ಎರಡು ಕುಂಟೆ ಕಟ್ಟಿ, ಇಬ್ಬರು ಕಾರ್ಮಿಕರ ಸಹಾಯದೊಂದಿಗೆ ಬೈಕನ್ನೇರಿ ಎಡೆಕುಂಟೆ ಹೊಡೆಯುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇತ್ತಿಚೆಗೆ ಮೇವಿನ ಕೊರತೆ ಮತ್ತು ಎತ್ತುಗಳನ್ನು ಸಾಕಲು ಹೆಚ್ಚು ಖರ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲರೂ ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಎತ್ತುಗಳೇ ಇಲ್ಲದೇ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಜಮೀನನ್ನು ನೇಗಿಲ ಹೊಡೆಯಲು ಟ್ರ್ಯಾಕ್ಟರ್ ಬಳಸುತ್ತಿದ್ದರು. ಆದರೆ, ಎಡೆಕುಂಟೆ ಹೊಡೆಯಲು ಎತ್ತುಗಳನ್ನೆ ಬಳಸುತ್ತಿದ್ದರು. ಈಗ ಎತ್ತುಗಳ ಬಾಡಿಗೆಯೂ ಹೆಚ್ಚಾಗಿದ್ದರಿಂದ ರೈತ ಮಹಾಂತೇಶ ಬೈಕ್ ಏರಿ ಎಡೆಕುಂಟೆ ಹೊಡೆದು, ಖರ್ಚಿಗೆ ಕಡಿವಾಣ ಹಾಕಿದ್ದಾರೆ. ಅಲ್ಲದೇ ಇವರನ್ನು ನೋಡಿದವರೆಲ್ಲಾ ನಾವು ಹೀಗೆ ಮಾಡಬಹುದಲ್ಲ ಎನ್ನುವಷ್ಟರ ಮಟ್ಟಿಗೆ ಮಾದರಿಯಾಗಿದ್ದಾರೆ.
1500 ರೂ ಉಳಿತಾಯ ಮಾಡಬಹುದು: ಈಟಿವಿ ಭಾರತ ರೈತ ಮಹಾಂತೇಶ ಜೊತೆಗೆ ಮಾತಿಗಿಳಿದಾಗ, "ಈ ಬಾರಿ ಮಳೆ ಕೈ ಕೊಟ್ಟಿದ್ದರಿಂದ ಬರಗಾಲ ಸ್ಥಿತಿ ನಿರ್ಮಾಣವಾಗಿ ಮೇವಿನ ಕೊರತೆಯಾಗಿ ಎತ್ತುಗಳನ್ನು ತೆಗೆದಿದ್ದೇವೆ. ಬೈಕಿಗೆ 150 ರೂ. ಪೆಟ್ರೋಲ್ ಹಾಕಿದ್ದು, ಇದರಲ್ಲಿ ಮೂರೂ ಎಕರೆ ಎಡೆಕುಂಟೆ ಹೊಡೆಯಬಹುದು. ಎತ್ತುಗಳಿಂದ ಎಡೆಕುಂಟೆ ಹೊಡೆಯಬೇಕಾದರೆ ಎತ್ತುಗಳಿಗೆ 1500 ರೂ. ಬಾಡಿಗೆ ಕೊಡಬೇಕು. ಕೂಲಿಕಾರರಿಗೆ ತಲಾ 300 ರೂ. ಕೊಡಬೇಕಾಗುತ್ತದೆ. ಇನ್ನು ಬೈಕ್ನಿಂದ ಹೊಡೆಯುವುದರಿಂದ 1500 ರೂ. ಉಳಿತಾಯವಾಗುತ್ತದೆ" ಎಂದು ವಿವರಿಸಿದರು.
ಮುಂದುವರಿದು ಮಾತನಾಡಿದ ರೈತ ಮಹಾಂತೇಶ, ಕಳೆದ ವರ್ಷ ಹೆಸರು, ಉದ್ದು ಬೆಳೆದಿದ್ದ ಹೊಲದಲ್ಲೂ ಕೂಡ ಬೈಕ್ ಮೂಲಕವೇ ಎಡೆಕುಂಟೆ ಹೊಡಿದಿದ್ದೆ. ಈಗ ಗೋವಿನ ಜೋಳ 4 ಇಂಚು ಬೆಳೆದಿದ್ದು, ಮುಂದೆ ಮೂರು ಬಾರಿಯೂ ಬೈಕ್ ಮೇಲೆಯೇ ಎಡೆ ಹೊಡೆಯುತ್ತೇನೆ. ಕೊನೆಗೆ ಒಮ್ಮೆ ಎತ್ತುಗಳಿಂದ ಹೊಡೆಯುತ್ತೇನೆ ಎಂದರು.
ಅವಶ್ಯಕತೆಯು ಆವಿಷ್ಕಾರದ ತಾಯಿ: ಕೆಎಲ್ಇ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಮಹಾಂತೇಶ ರಾಮಣ್ಣವರ ಮಾತನಾಡಿ, "ಅವಶ್ಯಕತೆಯು ಆವಿಷ್ಕಾರದ ತಾಯಿ ಎಂಬ ಮಾತಿನಂತೆ ತಮ್ಮ ಬಳಿ ಎತ್ತುಗಳು ಇಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೇ ತಮ್ಮ ಬೆಳೆ ಸಂರಕ್ಷಿಸಲು ಬೈಕ್ ಮೂಲಕ ಎಡೆಕುಂಟೆ ಹೊಡೆಯುತ್ತಿರುವುದು ನೋಡಿ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಇತ್ತಿಚೆಗೆ ನಮ್ಮ ರೈತರು ತಂತ್ರಜ್ಞಾನಕ್ಕೆ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ರೀತಿಯ ಆವಿಷ್ಕಾರಗಳಿಗೆ ಸರಕಾರ ಕೂಡ ಉತ್ತೇಜನ ನೀಡಬೇಕು. ಇದರಿಂದ ಎಲ್ಲ ರೈತರಿಗೆ ಬಹಳಷ್ಟು ಅನುಕೂಲ ಆಗುತ್ತದೆ ಎಂದರು.
ಒಟ್ಟಾರೆ ಬೆಳಗಾವಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಪರ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿದ್ದು, ಬಹಳಷ್ಟು ಜನರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗುತ್ತಿದ್ದಾರೆ. ಮುಂದೆ ಇನ್ನು ಯಾವ ರೀತಿ ಈ ಸರ್ಕಾರ ಆಡಳಿತ ನೀಡುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಗಣೇಶ ಚತುರ್ಥಿಗೆ ದಿನಗಣನೆ.. 6 ದಶಕಗಳಿಂದ ಬೆಳಗಾವಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕುಟುಂಬ