ಬೆಳಗಾವಿ : ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದ್ರೆ, ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಆದ್ದರಿಂದ ಮೂರು ದಿನಗಳಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆಗಾಲ ಆರಂಭಗೊಂಡಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆಯನ್ನು ಮಾಡಿದ ಬಳಿಕ ಜಿಲ್ಲಾಡಳಿತಕ್ಕೆ ವರದಿಯನ್ನು ಸಲ್ಲಿಸಿ ದೃಢೀಕರಿಸಬೇಕು ಎಂದರು.
ಒಂದು ಲಕ್ಷ ಕ್ಯೂಸೆಕ್ ಹರಿವು ಬಂದರೆ ನೀರು ನುಗ್ಗುವಂತಹ ತೋಟದ ಮನೆಗಳು ಮತ್ತು ಗ್ರಾಮಗಳ ಪಟ್ಟಿ ತಯಾರಿಸಬೇಕು. ಕೃಷ್ಣೆಯಲ್ಲಿ ಎರಡು ಲಕ್ಷ ಕ್ಯೂಸೆಕ್ ಮೀರಿದ್ರೆ ಮಾಂಜರಿ, ಯಡೂರು, ಹಿಂಗಳಿ, ಚಂದೂರ, ಚಂದೂರ ಟೇಕ್ ಸೇರಿ ಏಳು ಗ್ರಾಮಗಳ ಮುಳುಗಡೆಯಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮಹಾರಾಷ್ಟ್ರದ ಜಲಾಶಯಗಳು ಶೇ.90 ಭರ್ತಿಯಾದಾಗ ಹಂತ ಹಂತವಾಗಿ ನೀರು ಬಿಡುಗಡೆ ಮಾಡಿದ್ರೆ ಪ್ರವಾಹ ಸ್ಥಿತಿ ತಡೆಗಟ್ಟಬಹುದಾದ್ರೆ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮುಂಚಿತವಾಗಿ ಚರ್ಚಿಸಿ ಪರಿಸ್ಥಿತಿ ನಿರ್ವಹಣೆಗೆ ಪ್ರಯತ್ನಿಸಲಾಗುವುದು. ಖಾನಾಪುರ ಭಾಗದಲ್ಲಿ ಜಾಸ್ತಿ ಮಳೆಯಾದಾಗ ತಕ್ಷಣ ನವೀಲುತೀರ್ಥ ಜಲಾಶಯದ ನೀರಿನ ಪ್ರಮಾಣ ನಿರ್ವಹಣೆ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.
ಮಹಾರಾಷ್ಟ್ರದಿಂದ ನೀರು ಬಿಡುಗಡೆ, ಮಳೆಯ ಪ್ರಮಾಣ ಮತ್ತು ಕೃಷ್ಣಾ, ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾದಾಗ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ವರದಿ ವಿಳಂಬ, ನೋಟಿಸ್ ನೀಡಲು ಸೂಚನೆ : ಕೊರೊನಾಗೆ ಸಂಬಂಧಿಸಿದಂತೆ ಗಂಟಲು ದ್ರವ ಮಾದರಿ ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ಕಳಿಸುವುದು. ಕೆಲವು ಕಡೆ ತಡವಾಗುತ್ತಿರುವುದರಿಂದ ವರದಿ ಕೂಡ ವಿಳಂಬವಾಗುತ್ತಿದೆ. ಆದ್ದರಿಂದ ಸಂಗ್ರಹಿತ ಮಾದರಿಯನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲು ವಿಳಂಬ ಮಾಡುವ ತಾಲೂಕು ಆರೋಗ್ಯಾಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಸೂಚನೆ ನೀಡಿದರು.