ಬೆಳಗಾವಿ: ನಿನ್ನೆ ಕೋವಿಡ್ ಸೋಂಕಿನಿಂದ ಮೃತಪಟ್ಟ 22 ಮಂದಿಯ ಶವವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ, ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿರೋದಾಗಿ ಮಾಹಿತಿ ನೀಡಿದ್ದು ಜಿಲ್ಲಾಡಳಿತದ ನಡೆ ಅನುಮಾನ ಹುಟ್ಟುವಂತೆ ಮಾಡುತ್ತಿದೆ.
ನಗರದ ಅಂಜುಮನ್ ಇಸ್ಲಾಂ ಸ್ಮಶಾನದಲ್ಲಿ ನಿನ್ನೆ ಒಂದೇ ದಿನ 22 ಕೋವಿಡ್ ಹಾಗೂ ಸದಾಶಿವ ನಗರದ ಸ್ಮಶಾನದಲ್ಲಿ ನಾಲ್ವರು ಸೇರಿ ಒಟ್ಟು 26 ಕೋವಿಡ್ ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಜಿಲ್ಲಾಡಳಿತದ ಹೆಲ್ತ್ ಬುಲೆಟಿನ್ ಲೆಕ್ಕಕ್ಕೂ ಸ್ಮಶಾನದ ಲೆಕ್ಕಕ್ಕೂ ಅಜಗಜಾಂತರ ಕಂಡು ಬರುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಹಾನಗರ ಪಾಲಿಕೆ ಮಾಜಿ ಸದಸ್ಯ ಫಯಿಮ್ ನಾಯಿಕವಾಡಿ, ಜಿಲ್ಲಾಡಳಿತ ಕೋವಿಡ್‌ನಿಂದ ಮೃತಪಟ್ಟವರ ಬಗ್ಗೆ ಸರಿಯಾದ ಲೆಕ್ಕ ಕೊಡುತ್ತಿಲ್ಲ. ಸದಾಶಿವ ನಗರದ ಸ್ಮಶಾನ ಹಾಗೂ ಅಂಜುಮನ್ ಇಸ್ಲಾಂ ಸ್ಮಶಾನದಲ್ಲಿ ಬೆಳಗ್ಗೆಯಿಂದ ಈವರೆಗೆ ತಲಾ ಆರರಂತೆ ಒಟ್ಟು 12 ಕೋವಿಡ್ ಶವಗಳ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಜಿಲ್ಲಾಡಳಿತ ಮಾತ್ರ ಸತ್ಯವನ್ನು ಮುಚ್ಚಿಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.