ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ರಂಗೇರುತ್ತಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಬಹುತೇಕ ಹಾಲಿ ನಿರ್ದೇಶಕರೇ ಕಣದಲ್ಲಿದ್ದು, ಶತಮಾನದ ಇತಿಹಾಸ ಹೊಂದಿರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇದೇ ಮೊದಲ ಸಲ ಆರ್.ಎಸ್.ಎಸ್ ನಾಯಕರೂ ಎಂಟ್ರಿಯಾಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲೇ ಇರುವ ಹಿರಿಯ ಶಾಸಕ ಉಮೇಶ್ ಕತ್ತಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಒಂದಾಗ್ತಾರಾ, ಇಲ್ಲವೇ ಎದುರಾಗ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಉಮೇಶ್ ಕತ್ತಿ ಸಹೋದರ, ಮಾಜಿ ಸಂಸದ ರಮೇಶ ಕತ್ತಿ (ಅಧ್ಯಕ್ಷ), ಎಸ್.ಜಿ.ಢವಳೇಶ್ವರ (ಉಪಾಧ್ಯಕ್ಷ) ಲಕ್ಷ್ಮಣ ಸವದಿ, ಆನಂದ ಮಾಮನಿ, ಎ.ಸಿ.ಪಾಟೀಲ, ಮಹಾಂತೇಶ ದೊಡ್ಡನಗೌಡರ, ಎ.ಎಂ.ಕುಲಗುಡೆ, ಡಿ.ಟಿ.ಪಾಟೀಲ, ಎಸ್.ಎಸ್.ಧವನ್, ಎಸ್.ಎನ್.ಡೋಣಿ, ಅಣ್ಣಾ ಸಾಹೇಬ ಜೊಲ್ಲೆ, ಪಿ.ಬಿ.ದ್ಯಾಮನಗೌಡರ, ಆರ್.ಸಿ.ಅಂಕಲಗಿ, ಎಲ್.ಎ.ಚಿಂಗಲೆ, ಎ.ಆರ್.ಅವಕ್ಕನವರ, ಎನ್.ಬಿ.ಕಪ್ಪಲಗುದ್ದಿ ಹಾಲಿ ನಿರ್ದೇಶಕರಾಗಿದ್ದಾರೆ.
ವಿಶೇಷ ಅಂದ್ರೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪುತ್ರ ಸತೀಶ್ ಕಡಾಡಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಸಲ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಕತ್ತಿ ಬಣಕ್ಕೆ ನನ್ನ ಬೆಂಬಲ ಎಂದು ಶಾಸಕಿ ಅಂಜಲಿ ಘೋಷಿಸಿದ್ದಾರೆ.
ಆರ್.ಎಸ್.ಎಸ್ ಎಂಟ್ರಿ
ಡಿಸಿಸಿ ಬ್ಯಾಂಕ್ ಚುನಾವಣೆ ಮೇಲೆ ಬಿಜೆಪಿ ವರಿಷ್ಠರು ಹಾಗೂ ಆರ್.ಎಸ್.ಎಸ್ ನಾಯಕರು ಕಣ್ಣಿಟ್ಟಿದ್ದಾರೆ. ಈ ಹಿಂದೆ ನಡೆದ ಪಿಎಲ್ಡಿ ಬ್ಯಾಂಕ್ ಚುನಾವಣೆ ವೇಳೆ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸೆಣಸಾಟಕ್ಕೆ ಕಾಂಗ್ರೆಸ್ ಮುಜುಗರಕ್ಕೆ ಒಳಗಾಗಬೇಕಾಯಿತು. ಅಲ್ಲದೆ ಮೈತ್ರಿ ಸರ್ಕಾರ ಪತನಕ್ಕೂ ಕಾರಣವಾಯಿತು. ನವೆಂಬರ್ 6ರಂದು ಚನಾವಣೆ ನಡೆಯಲಿದ್ದು, ಅವಿರೋಧ ಆಯ್ಕೆಗೆ ಆದ್ಯತೆ ನೀಡುವಂತೆ ಆರ್.ಎಸ್.ಎಸ್ ಮುಖಂಡರು ಸಲಹೆ ರೂಪದಲ್ಲಿ ನಿರ್ದೇಶನ ನೀಡಿದ್ದಾರೆ.
ಹೀಗಾಗಿ ಕತ್ತಿ-ಸವದಿ ಕೂಡಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತಾರೋ? ಇಲ್ಲವೇ ಈ ಚುನಾವಣೆಯಲ್ಲಿ ಎದುರಾಗುತ್ತಾರೋ? ಎಂಬುವುದು ಕುತೂಹಲ ಮೂಡಿಸಿದೆ. ಡಿಸಿಸಿ ಬ್ಯಾಂಕ್ ಮೀಟಿಂಗ್ ಹಾಲ್ನಲ್ಲಿ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ, ಈರಣ್ಣ ಕಡಾಡಿ, ಅಣ್ಣಾ ಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕವಟಗಿಮಠ ಗೌಪ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ತೀರ್ಮಾನ ಆಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.