ಬೆಳಗಾವಿ: ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆರಂಭಿಸಿದರು.
ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ತಿಂಗಳ ಮೂರನೇ ವಾರದಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕೆಂಬ ಮಾರ್ಗಸೂಚಿಯಂತೆ ಇಂದು ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬೈಲವಾಡ ಗ್ರಾಮದಲ್ಲಿ ಆರಂಭಗೊಂಡಿತು. ಈ ವೇಳೆ, ಬೆಳಗಾವಿಯಿಂದ ಬಸ್ ಮೂಲಕ ಬೈಲವಾಡ ಗ್ರಾಮಕ್ಕೆ ಆಗಮಮಿಸಿದ ಜಿಲ್ಲಾಧಿಕಾರಿಗಳು ನೇರವಾಗಿ ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ನಂತರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಸತಿ ನಿಲಯದಲ್ಲಿ ಎಂ.ಜಿ.ಹಿರೇಮಠ, ಶಾಸಕ ಮಹಾಂತೇಶ ಕೌಜಲಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ಉಪಹಾರ ಸೇವಿಸಿದರು.
ಓದಿ: ಮಹಾರಾಷ್ಟ್ರ, ಕೇರಳ ಗಡಿ ಬಳಿಯ ರಾಜ್ಯದ 10 ಜಿಲ್ಲೆಗಳಲ್ಲಿ ತೀವ್ರ ನಿಗಾ: ಸಚಿವ ಸುಧಾಕರ್
ಹುತಾತ್ಮ ಯೋಧದ ಪ್ರತಿಮೆಗೆ ಮಾಲಾರ್ಪಣೆ:
ಗುಂಡೇಟಿಗೆ ಬಲಿಯಾದ ಸಿಆರ್ಪಿಎಫ್ ಹುತಾತ್ಮ ಯೋಧ ಮಂಜುನಾಥ ಮುದುಕನಗೌಡರ ಅವರ ಪ್ರತಿಮೆಗೆ ಜಿಲ್ಲಾಧಿಕಾರಿಗಳು ಮಾಲಾರ್ಪಣೆ ಮಾಡಿದರು. ಈ ವೇಳೆ, ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಆರತಿ ಬೆಳಗಿ ಹಣೆಗೆ ತಿಲಕವನ್ನಿಟ್ಟು ಮಾಲಾರ್ಪಣೆ ಮಾಡಿ ಗ್ರಾಮಕ್ಕೆ ಬರ ಮಾಡಿಕೊಂಡರು. ಅಲ್ಲಿಂದ ಗ್ರಾಮ ಪ್ರದಕ್ಷಿಣೆ ಆರಂಭಿಸಿದ ಡಿಸಿ, ಮೊದಲಿಗೆ ಹರಿಜನಕೇರಿಯ ಮನೆಗಳಿಗೆ ಭೇಟಿ ನೀಡಿ ಕರಿಯಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಗಲ್ಲಿ,ಗಲ್ಲಿ ಸುತ್ತಿದ ಡಿಸಿ:
ಬೈಲವಾಡದ ಪ್ರತಿ ಗಲ್ಲಿ,ಗಲ್ಲಿಗೂ ಭೇಟಿ ನೀಡುತ್ತಿರುವ ಡಿಸಿಯವರು, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸ್ವಾತಂತ್ರ್ಯ ಯೋಧರ ಪಿಂಚಣಿ, ವಿದ್ಯುತ್ ಕಂಬ ತೆರವು, ರಸ್ತೆ ನಿರ್ಮಾಣ, ಚರಂಡಿ ದುರಸ್ತಿಗೆ ಸಂಬಂಧಿಸಿದಂತೆ ಜನರು ಮನವಿ ಮಾಡಿಕೊಂಡರು. ಈ ವೇಳೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕಲ್ಪಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು, ಶಾಸಕ ಮಹಾಂತೇಶ ಕೌಜಲಗಿ ಅವರು ಜನರಿಗೆ ತಿಳಿಸಿದರು.