ಬೆಳಗಾವಿ: ಇಂದಿನಿಂದ ಪದವಿ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗಳು ಆರಂಭ ಹಿನ್ನೆಲೆ ಬೆಳಗಾವಿಯಲ್ಲಿಯೂ ಪದವಿ ಕಾಲೇಜುಗಳು ತೆರೆದಿದ್ದು, ಬಿ. ಕೆ. ಕಾಲೇಜು ಸೇರಿದಂತೆ ಕೆಲ ಕಾಲೇಜುಗಳಲ್ಲಿ ಆಸನದ ವ್ಯವಸ್ಥೆ ಇಲ್ಲದ ಕಾರಣ ಕೋವಿಡ್ ನಿಯಮಾವಳಿ ಉಲ್ಲಂಘನೆಯಾಗಿದೆ.
ಕಾಲೇಜಿನಲ್ಲಿ ಆಸನದ ಕೊರತೆಯಿರುವ ಹಿನ್ನೆಲೆ ಒಂದೊಂದು ತರಗತಿ ಕೊಠಡಿಯಲ್ಲಿ 140ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಕೂರಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳ ಮಧ್ಯೆ ಸಾಮಾಜಿಕ ಅಂತರ ಪಾಲನೆಯಾಗಿಲ್ಲ.
ಇನ್ನು ಕೆಲವು ತರಗತಿಗಳಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಕೂಡ ಧರಿಸದೇ ಪಾಠ ಕೇಳುತ್ತಿದ್ದಾರೆ. ಕೊರೊನಾ ತಡೆಗೆ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗ ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದು ನಿಯಮಗಳಿದ್ದರೂ ಇಲ್ಲಿ ಕೆಲ ನಿಯಮಗಳನ್ನೂ ಗಾಳಿಗೆ ತೂರಿದಂತಿದೆ.
ಇನ್ನೂ ಈ ಸಂಬಂಧ ವಿದ್ಯಾರ್ಥಿಗಳು ಅಥವಾ ಸಿಬ್ಬಂದಿಯನ್ನು ದೂರುವಂತಿಲ್ಲ. ಏಕೆಂದರೆ ಕೊಠಡಿಗಳ ಸಮಸ್ಯೆ, ಆಸನದ ಕೊರತೆ ಇರುವ ಕಾರಣ ತರಗತಿಯಲ್ಲಿ ಅನಿವಾರ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳನ್ನು ಕುಳ್ಳಿರಿಸಲಾಗಿದೆ ಎನ್ನುತ್ತಾರೆ ಪ್ರಾಂಶುಪಾಲರಾದ ಎಸ್. ಎನ್. ಪಾಟೀಲ್. ಆದರೆ, ತರಗತಿಯಲ್ಲಿ ಕುರಿ ಹಿಂಡಿನಂತೆ ವಿದ್ಯಾರ್ಥಿಗಳನ್ನು ಕೂಳ್ಳಿರಿಸಿರುವ ಆಡಳಿತ ಮಂಡಳಿ ನಡೆಗೆ ಸಾರ್ವಜನಿಕರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.