ಬೆಳಗಾವಿ: ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸರು ನಗರದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದರಿಂದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವೃದ್ಧ ರೋಗಿ ಹಾಗೂ ಗರ್ಭಿಣಿ ಪರದಾಡಿದರು. ಕಠಿಣ ನಿಯಮದ ಹೆಸರಿನಲ್ಲಿ ಇಲ್ಲಿನ ಪೊಲೀಸರು ಮಾನವೀಯತೆ ಮರೆತರಾ ಎಂಬ ಅನುಮಾನ ಮೂಡುತ್ತಿದೆ.
ಬಿಸಿಲಿನ ತಾಪಕ್ಕೆ ಮೂರ್ಛೆ ತಪ್ಪಿದ ವೃದ್ಧ:
ನಗರದ ಅಶೋಕ ವೃತ್ತದಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ಜನರನ್ನು ತಡೆದು ತೀವ್ರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮೊಮ್ಮಗನ ಜೊತೆ ಬೈಕ್‌ನಲ್ಲಿ ಆಸ್ಪತ್ರೆಗೆ ಹೊರಟಿದ್ದ ಕ್ಯಾನ್ಸರ್ ಪೀಡಿತ ವೃದ್ಧನೋರ್ವ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು. ಈ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ಮೂರ್ಛೆ ತಪ್ಪಿ ವೃದ್ಧ ನೆಲಕ್ಕೆ ಬಿದ್ದ ವೃದ್ಧನ ಆರೈಕೆ ಮಾಡಿ ಆತನ ಮೊಮ್ಮಗ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದದನು.
![belagavi-police-did-not-allow-patients-to-travel](https://etvbharatimages.akamaized.net/etvbharat/prod-images/kn-bgm-05-29-gharbiniya-pradat-vsl-ka10029_29042021134652_2904f_1619684212_1070.jpg)
ಆಟೋದಲ್ಲಿ ಗರ್ಭಿಣಿಯ ಪರದಾಟ:
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಇಲ್ಲಿನ ಅಶೋಕ ನಗರದಲ್ಲಿ ಆಟೋದಲ್ಲಿ ತೊಂದರೆಗೆ ಸಿಲುಕಿದ್ದರು. ಆದ್ರೆ, ಆಟೋ ವಾಹನದ ಮೇಲೆ ಕೋವಿಡ್ ಎಮರ್ಜೆನ್ಸಿ ಸ್ಟಿಕರ್ ಇದ್ದರೂ ಪೊಲೀಸರು ಗರ್ಭಿಣಿಗೆ ಅವಕಾಶ ನೀಡದ ಹಿನ್ನೆಲೆ ಸ್ಥಳಕ್ಕೆ ಮಾಧ್ಯಮದವರು ತೆರಳುತ್ತಿದ್ದಂತೆ ಆಕೆಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
![belagavi-police-did-not-allow-patients-to-travel](https://etvbharatimages.akamaized.net/etvbharat/prod-images/kn-bgm-05-29-gharbiniya-pradat-vsl-ka10029_29042021134652_2904f_1619684212_362.jpg)
ತುರ್ತುಸೇವೆಗೂ ಅನುವು ಮಾಡಿಕೊಡದ ಪೊಲೀಸರು:
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಸ್ತೆ ಕಂಪ್ಲೀಟ್ ಸೀಲ್ಡೌನ್ ಮಾಡಿದ್ದಾರೆ. ಪರಿಣಾಮ, ಅಗತ್ಯ ಸೇವೆಗಳಿಗೆ ಓಡಾಡುವ ಜನರು ಹಾಗೂ ಬಿಮ್ಸ್ ಆಸ್ಪತ್ರೆಗೆ ತೆರಳುವ ಜನರು ತೀವ್ರ ಪರದಾಡುವಂತಾಗಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್ ಬ್ಯಾರಿಕೇಡ್ ಹಾಕಿ ಕಂಪ್ಲೀಟ್ ಸೀಲ್ಡೌನ್ ಮಾಡಿದ್ದರಿಂದ ತುರ್ತು ಸೇವೆಗೂ ಅವಕಾಶ ಇಲ್ಲದಂತಾಗಿತ್ತು.
ಈ ವೇಳೆ ಅದೇ ಮಾರ್ಗದಲ್ಲಿ ಆಗಮಿಸಿದ ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ನೀಡದೇ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಆ್ಯಂಬುಲೆನ್ಸ್ ಡ್ರೈವರ್ ಬಳಿಕ ರಿವರ್ಸ್ ತೆಗೆದುಕೊಂಡು ಅನ್ಯ ಮಾರ್ಗದಲ್ಲಿ ತೆರಳಿದರು. ಅಗತ್ಯ ಸೇವೆಗಳಿಗೂ ಅವಕಾಶ ಮಾಡಿಕೊಡದ ಪೊಲೀಸರ ವಿರುದ್ಧ ಸಾರ್ವಜನಿಕರ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಪೊಲೀಸರು ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದೇವೆ ಎಂದು ಟ್ರಾಫಿಕ್ ಪೇದೆ ತಿಳಿಸಿದ್ದಾರೆ.