ಬೆಳಗಾವಿ: ಮನೆಯಲ್ಲಿ ಪತ್ನಿ ಕಾಟವೆಂದು ಲಕ್ಷಾಂತರ ರೂಪಾಯಿ ಹಣದೊಂದಿಗೆ ಗೋವಾ ಪ್ರವಾಸ ಹೊರಟ ಉದ್ಯಮಿಯನ್ನು ಬೆಳಗಾವಿ ಪೊಲೀಸರು ಮಾರ್ಗಮಧ್ಯೆ ತಡೆದಿದ್ದು, ವಿಚಾರಣೆ ಎದುರಿಸುವಂತಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋದರೆ ಸೂಕ್ತ ದಾಖಲಾತಿ ನೀಡಬೇಕು. ಇಲ್ಲದಿದ್ದರೆ, ಅಧಿಕಾರಿಗಳು ಹಣ ವಶಕ್ಕೆ ಪಡೆದುಕೊಳ್ಳುತ್ತಾರೆ. ಇದರಂತೆ, ಮುಂಬೈ ಉದ್ಯಮಿಯೊಬ್ಬರು 26 ಲಕ್ಷ ರೂಪಾಯಿ ಹಣದೊಂದಿಗೆ ಸಂಚರಿಸುತ್ತಿದ್ದಾಗ ಬೆಳಗಾವಿ ಪೊಲೀಸರು ನಗದು ಸಮೇತ ವಶಕ್ಕೆ ಪಡೆದಿದ್ದಾರೆ.
ಮುಂಬೈ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದ ಉದ್ಯಮಿ ಆನ್‌ಲೈನ್ ಮ್ಯಾಪ್ ಹಾಕಿಕೊಂಡು ಸಂಚಾರ ಆರಂಭಿಸಿದ್ದರು. ಆದರೆ, ಮ್ಯಾಪ್ ತಪ್ಪಾಗಿ ರಸ್ತೆಮಾರ್ಗ ತೋರಿಸಿದ್ದು, ಬೆಳಗಾವಿ ನಗರಕ್ಕೆ ಬಂದಿದ್ದಾರೆ. ನಗರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ 26 ಲಕ್ಷ ರೂಪಾಯಿ ನಗದು ಸಿಕ್ಕಿದ್ದು, ಇಷ್ಟೊಂದು ಹಣದೊಂದಿಗೆ ಎಲ್ಲಿಗೆ ಸಂಚಾರ ಮಾಡುತ್ತಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಕ್ತಿ, ನಾನು ಮುಂಬೈ ಮೂಲದ ಉದ್ಯಮಿ. ಮನೆಯಲ್ಲಿ ಹೆಂಡತಿ ಕಾಟ ತಾಳಲಾರದೆ ಗೋವಾಗೆ ಹೊರಟಿದ್ದೆ. ಆನ್‌ಲೈನ್ ಮ್ಯಾಪ್ ಹಾಕಿಕೊಂಡು ಕಾರು ಓಡಿಸುತ್ತಿದ್ದೆ. ಆದರೆ, ಬೆಳಗಾವಿ ನಗರಕ್ಕೆ ಇದು ಕರೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಹಣದ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಉದ್ಯಮಿಯ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಕ್ರಮಗಳ ಮೇಲೆ ಚು.ಆಯೋಗದ ಹದ್ದಿನ ಕಣ್ಣು: ₹39 ಕೋಟಿ ಮೌಲ್ಯದ ನಗದು, ಮದ್ಯ ಜಪ್ತಿ
ಚುನಾವಣಾ ಆಯೋಗದ ಕಟ್ಟೆಚ್ಚರ: ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಟ್ಟಿರುವ ರಾಜ್ಯ ಚುನಾವಣಾ ಆಯೋಗವು ಈವರೆಗೆ ಒಟ್ಟು 39.38 ಕೋಟಿ ರೂ. ಮೌಲ್ಯದ ನಗದು, ಮದ್ಯ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದೆ. ಪೊಲೀಸ್ ಇಲಾಖೆ ಮತ್ತು ಫ್ಲೈಯಿಂಗ್ ಸ್ಕ್ಯಾಡ್ ಸೇರಿ ಒಟ್ಟು 7.07 ಕೋಟಿ ನಗದು ಮತ್ತು 5.80 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ 21.76 ಲಕ್ಷ ರೂ. ಮೌಲ್ಯದ ಡ್ರಗ್ಸ್, 9.58 ಕೋಟಿ ಮೊತ್ತದ ಫ್ರೀಬೀಸ್ಗಳನ್ನು ವಶಕ್ಕೆ ಪಡೆಯಲಾಗಿದೆ. 172 ಎಫ್ಐಆರ್ ದಾಖಲಿಸಲಾಗಿದೆ.
ಐಟಿ ಇಲಾಖೆ 3.90 ಕೋಟಿ ರೂ.ನಗದು ಜಪ್ತಿ ಮಾಡಿದೆ. ಅಬಕಾರಿ ಇಲಾಖೆ 11.66 ಕೋಟಿ ಮೊತ್ತದ 1.93 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಂಡಿದೆ. 1.81 ಲಕ್ಷ ರೂ.ಮೊತ್ತದ 12 ಕೆ.ಜಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 264 ಗಂಭೀರ ಸ್ವರೂಪದ ಪ್ರಕರಣ, 195 ಪರವಾನಗಿ ಷರತ್ತು ಉಲ್ಲಂಘನೆ ಪ್ರಕರಣ, 14 ಎನ್ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್) ಮತ್ತು 737 ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜೊತೆಗೆ 150 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.