ಬೆಳಗಾವಿ: ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ನಡೆದ ಜೋಡಿ ಕೊಲೆಯ ಹಂತಕನನ್ನು ಜಿಲ್ಲೆಯ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ನಿವಾಸಿ ಭೀಮಪ್ಪ ಮಲ್ಲಪ್ಪ ತೀರಗಪ್ಪನವರ ಬಂಧಿತ ಆರೋಪಿ.
ಮೇ. 17ರಂದು ಕಿತ್ತೂರು ಪಟ್ಟಣದ ಶಿವಾ ಪೆಟ್ರೋಲ್ ಬಂಕ್ನೊಳಗೆ ನುಗ್ಗಿದ್ದ ಹಂತಕ ಭೀಮಪ್ಪ ಇಬ್ಬರ ಕೊಲೆಗೈದಿದ್ದ. ಬಂಕ್ನಲ್ಲಿ ಮಲಗಿದ್ದ ಮಂಜುನಾಥ ಹಾಗೂ ಮುಸ್ತಾಕ್ ಬೀಡಿ ಎಂಬುವರನ್ನು ಕೊಡಲಿಯಿಂದ ಬರ್ಬರವಾಗಿ ಹತ್ಯೆಗೈಯ್ದಿದ್ದ. ಹತರಾದವರು ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಕೃತ್ಯದ ಬಳಿಕ ಭೀಮಪ್ಪ ಕ್ಯಾಶ್ ಕೌಂಟರ್ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದ.
ತಾನು ಮಾಡಿಕೊಂಡಿದ್ದ ವಿಪರೀತ ಸಾಲ ತೀರಿಸಲು ಭೀಮಪ್ಪ ಬಂಕ್ ದರೋಡೆಗೆ ಸ್ಕೆಚ್ ಹಾಕಿದ್ದ. ಬಂಕ್ನಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿದ್ದ ಭೀಮಪ್ಪ ಇಬ್ಬರನ್ನು ಕೊಲೆಗೈದು ದರೋಡೆ ಮಾಡಿ ಪರಾರಿಯಾಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಸುಧೀರಕುಮಾರ್ ರೆಡ್ಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಆರೋಪಿಯಿಂದ ಕೊಲೆಗೆ ಬಳಸಿದ ಕೊಡಲಿ ಹಾಗೂ 25 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.