ಬೆಳಗಾವಿ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಗಡಿ ಜಿಲ್ಲೆ ಬೆಳಗಾವಿಯ ಮೂವರು ಶಾಸಕರಿಗೆ ಇದೀಗ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಬಿಜೆಪಿ ನಾಯಕರ ಈ ನಡೆ ಕುಂದಾನಗರಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಎಸ್‌ವೈ ಸಂಪುಟದಲ್ಲಿ ಎರಡು ವರ್ಷ ಸಚಿವರಾಗಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬೊಮ್ಮಾಯಿ ಸಂಪುಟದಲ್ಲಿ ಮರಳಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಶ್ರೀಮಂತ ಪಾಟೀಲಗೆ ಪರ್ಯಾಯವಾಗಿ ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಚಾನ್ಸ್ ಸಿಗಬಹುದು ಎಂಬ ಜಿಲ್ಲೆಯ ಜನರ ನಿರೀಕ್ಷೆಗಳು ಹುಸಿಯಾಗಿವೆ. ಇನ್ನು ಜಿಲ್ಲೆಯಿಂದ ಡಿಸಿಎಂ ನಂಥ ಮಹತ್ವದ ಹುದ್ದೇಗೇರಿದ್ದ ಲಕ್ಷ್ಮಣ ಸವದಿ ಕೂಡ ಬೊಮ್ಮಾಯಿ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿಲ್ಲ.
ಹಿಂದಿನ ಸಂಪುಟದಲ್ಲಿ ಐವರು ಸಚಿವರು ಜಿಲ್ಲೆಯವರಿದ್ದರು. ಇದೀಗ ಬೊಮ್ಮಾಯಿ ಸಂಪುಟದಲ್ಲಿ ಇಬ್ಬರು ಮಾತ್ರ ಸಚಿವರಾಗಿದ್ದು, ಮೂವರನ್ನು ಕೈಬಿಡಲಾಗಿದೆ. ಇದರಲ್ಲಿ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಮೊದಲೇ ರಾಜೀನಾಮೆ ನೀಡಿದ್ದರು. ಸದ್ಯ ಉಮೇಶ್ ಕತ್ತಿ ಹಾಗೂ ಶಶಿಕಲಾ ಜೊಲ್ಲೆಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ಶ್ರೀಮಂತ ಪಾಟೀಲ ಮೌನಕ್ರಾಂತಿ: ಸಚಿವ ಸ್ಥಾನ ಕಳೆದುಕೊಂಡಿರುವ ಶ್ರೀಮಂತ ಮೌನಕ್ಕೆ ಶರಣಾಗಿದ್ದಾರೆ. ಹಿರಿಯ ಪುತ್ರ ಶ್ರೀನಿವಾಸ ಅವರ ರಾಜಕೀಯ ಭವಿಷ್ಯವೇ ಶ್ರೀಮಂತ ಪಾಟೀಲರ ಮೌನಕ್ಕೆ ಶರಣಾಗುವಂತೆ ಮಾಡಿದೆ. ಅಲ್ಲದೇ, ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಬದಲು ಶ್ರೀನಿವಾಸ ಕಾಗವಾಡ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಶ್ರೀನಿವಾಸಗೆ ಟಿಕೆಟ್ ನೀಡಲು ಬಿಜೆಪಿ ನಾಯಕರೂ ಒಪ್ಪಿದ್ದು, ಮಗನ ಭವಿಷ್ಯಕ್ಕೆ ಮಂತ್ರಿಗಿರಿ ಆಸೆಯನ್ನು ತ್ಯಜಿಸಿದ್ದಾರೆ.
ಕುಮಟಳ್ಳಿಗೆ ಮತ್ತೆ ನಿರಾಸೆ: ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದ ಬಹುತೇಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಪಚುನಾವಣೆಯಲ್ಲಿ ಸೋತಿದ್ದ ಎಂಟಿಬಿ ನಾಗರಾಜ ಅವರನ್ನು ಪರಿಷತ್ತಿಗೆ ಆಯ್ಕೆ ಮಾಡಿ ಮಂತ್ರಿ ಮಾಡಲಾಗಿದೆ. ಉಪಚುನಾವಣೆಯಲ್ಲಿ ಗೆದ್ದ ಬಹುತೇಕರು ಮಂತ್ರಿ ಆಗಿದ್ದಾರೆ. ಬಿಎಸ್‌ವೈ ಸಂಪುಟದಲ್ಲಿ ಲಕ್ಷ್ಮಣ ಸವದಿಗೆ ಅವಕಾಶ ಸಿಕ್ಕಿದಕ್ಕೆ ಮಹೇಶ ಕುಮಟಳ್ಳಿ ಮಂತ್ರಿ ಆಗಿರಲಿಲ್ಲ. ಇದೀಗ ಅಖಂಡ ಅಥಣಿ ತಾಲೂಕಿನ ಲಕ್ಷ್ಮಣ ಸವದಿ ಹಾಗೂ ಶ್ರೀಮಂತ ಪಾಟೀಲ್ ಸಂಪುಟದಿಂದ ಔಟ್ ಆಗಿದ್ದಾರೆ. ಹೀಗಾಗಿ ಈ ಸಲ ಚಾನ್ಸ್ ಸಿಗಬಹುದು ಎಂದು ಮಹೇಶ ಕುಮಟಳ್ಳಿ ನಿರೀಕ್ಷೆ ಮಾಡಿದ್ದರು. ಆದರೆ, ಈ ಸಲವೂ ಮಹೇಶ ಕುಮಟಳ್ಳಿಗೆ ನಿರಾಸೆ ಆಗಿದೆ.
ಕ್ಲೀನ್ ಚೀಟ್ ಸಿಕ್ಕರಷ್ಟೇ ಮಂತ್ರಿಗಿರಿ: ರಾಸಲೀಲೆ ಸಿಡಿ ಪ್ರಕರಣ ಬಹಿರಂಗದಿಂದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ. ಈ ಪ್ರಕರಣದಲ್ಲಿ ಕ್ಲೀನ್ ಚೀಟ್ ಸಿಕ್ಕರಷ್ಟೇ ಭವಿಷ್ಯದಲ್ಲಿ ರಮೇಶ್ ಜಾರಕಿಹೊಳಿಗೆ ಮರಳಿ ಮಂತ್ರಿ ಆಗಲಿದ್ದಾರೆ. ರಮೇಶ್ ಬದಲಿಗೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಸಂಪುಟ ಸೇರುತ್ತಾರೆ ಎನ್ನಲಾಗುತ್ತಿತ್ತು. ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಆಸ್ಪದ ನೀಡಿಲ್ಲ.
ಒಟ್ಟಾರೆಯಾಗಿ ಮಂತ್ರಿ ಸ್ಥಾನಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಜಿಲ್ಲೆಯ ಮೂವರು ಶಾಸಕರು ಸಂಪುಟದಿಂದ ಹೊರಗಿದ್ದಾರೆ. ರಮೇಶ್ ಹೊರತುಪಡಿಸಿ ಉಳಿದ ಇಬ್ಬರಿಗಾದರೂ ಅವಕಾಶ ನೀಡದೇ ಬಿಜೆಪಿ ನಾಯಕರು ಅಸಡ್ಡೆ ತೋರಿದ್ದು, ಕುಂದಾನಗರಿ ನಿವಾಸಿಗಳ ಕೋಪಕ್ಕೆ ಕಾರಣವಾಗಿದೆ.