ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಭವದ ವಿಚಾರವಾಗಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಮತ್ತು ಕಾಂಗ್ರೆಸ್ ಶಾಸಕ ರಾಜು ಸೇಠ್ ನಡುವೆ ಪರಸ್ಪರ ವಾಗ್ದಾಳಿ ನಡೆಯಿತು. ಮರಾಠಿ ಭಾಷೆಯಲ್ಲಿಯೇ ನೊಟೀಸ್ ನೀಡುವಂತೆ ಎಂಇಎಸ್ ನಗರಸೇವಕರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವರ್ಗಾವಣೆ ಸೇರಿ ಕೆಲ ಪ್ರಮುಖ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು.
ಪಾಲಿಕೆ ಸಭೆಯ ಆರಂಭದಲ್ಲಿ ನಾಡಗೀತೆ ಮುಗಿದ ಬಳಿಕ ಎಂಇಎಸ್ನ ಮೂವರು ನಗರ ಸೇವಕರು ಮರಾಠಿ ಭಾಷೆಯಲ್ಲಿ ನೊಟೀಸ್ ಸೇರಿದಂತೆ ಇತರ ಕಾಗದಪತ್ರಗಳನ್ನು ಕೊಡುವಂತೆ ಆಗ್ರಹಿಸಿ ಧರಣಿಗೆ ಮುಂದಾದರು. ಇದು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಗರ ಸೇವಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಶಾಸಕ ಅಭಯ್ ಪಾಟೀಲ್ ಮಾತನಾಡಿ, "ಶಾಸಕ ರಾಜು ಸೇಠ್ಗೆ ಅನುಭವ ಕೊರತೆ" ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜು ಸೇಠ್, ಆಕ್ರೋಶ ಹೊರಹಾಕುತ್ತಾ, "ಯಾರ ಅನುಭವ ಏನೆಂಬುದು ತೀರ್ಮಾನವಾಗುತ್ತದೆ" ಎಂದರು. ಗೊಂದಲ ಹೆಚ್ಚಾಗುತ್ತಿದ್ದಂತೆ ಮೇಯರ್ ಶೋಭಾ ಸೋಮನಾಚೆ ಮಧ್ಯಪ್ರವೇಶಿಸಿ ಮುಂದಿನ ಸಭೆಯ ನೊಟೀಸ್ ಅನ್ನು ಭಾಷಾಂತರ ಮಾಡಿ ಕೊಡಲಾಗುವುದು ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.
ಅಧಿಕಾರಿಗಳ ವರ್ಗಾವಣೆಗೆ ಠರಾವ್: ಅನೇಕ ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲೇ ಇರುವ ಅಧಿಕಾರಿಗಳ ವರ್ಗಾವಣೆಗೆ ಇಂದಿನ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಯಿತು. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ನಿಯಮಗಳ ಪ್ರಕಾರ ಗ್ರೇಡ್-ಎ ಮತ್ತು ಗ್ರೇಡ್-ಬಿ ವರ್ಗದ ಅಧಿಕಾರಿಗಳು ಒಂದೇ ಹುದ್ದೆಯಲ್ಲಿ ಮೂರು ವರ್ಷ ಇರಬೇಕು. ಸಿ ಗ್ರೇಡ್ ಅಧಿಕಾರಿಗಳು ನಾಲ್ಕು ವರ್ಷ, ಡಿ ಗ್ರೇಡ್ ನೌಕರರು 7 ವರ್ಷದ ಅವಧಿಗೆ ಒಂದೇ ಹುದ್ದೆಯಲ್ಲಿ ಇರಬಹುದು. ಆದರೆ ಈ ನಿಯಮ ಬೆಳಗಾವಿ ಪಾಲಿಕೆಯಲ್ಲಿ 1991ರಿಂದ ಸರಿಯಾಗಿ ಪಾಲನೆ ಆಗಿಲ್ಲ. ಒಂದೇ ಕಡೆ ಇರುವುದರಿಂದ ಅಧಿಕಾರಿಗಳು, ನೌಕರರಲ್ಲಿ ಉದಾಸೀನ, ನಿರ್ಲಕ್ಷ್ಯ ಭಾವನೆ ಮೂಡುವಂತೆ ಆಗಿದೆ. ಇದರಿಂದಾಗಿ ಬೆಳಗಾವಿ ಮಹಾನಗರದ ಅಭಿವೃದ್ಧಿ ಕುಂಠಿತಗೊಂಡಿದ್ದು, ಅಧಿಕಾರಿಗಳ ವರ್ಗಾವಣೆಗೆ ಠರಾವ್ ಪಾಸ್ ಮಾಡುವಂತೆ ಪಾಲಿಕೆ ಸದಸ್ಯ ಡಾ. ಶಂಕರಗೌಡ ಪಾಟೀಲ್ ಆಗ್ರಹಿಸಿದರು. ಬಳಿಕ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಠರಾವ್ ಪಾಸ್ ಮಾಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು. ಇದೇ ವೇಳೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯ ಮಾತಿನ ಚಕಮಕಿ ನಡೆಯಿತು.
ಎಲ್ಲಾ ಅಧಿಕಾರಿಗಳನ್ನು ಒಂದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇದರಿಂದ ಪ್ರಾಮಾಣಿಕ ಅಧಿಕಾರಿಗಳ ಮನೋಬಲ ಕುಗ್ಗಿಸಿದಂತೆ ಆಗುತ್ತದೆ ಎಂದು ಅಧಿಕಾರಿಗಳ ವರ್ಗಾವಣೆ ಪ್ರಸ್ತಾಪಕ್ಕೆ ಶಾಸಕ ರಾಜು ಸೇಠ್ ವಿರೋಧ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಬಡಾವಣೆಯನ್ನು ಪಾಲಿಕೆಗೆ ಹಸ್ತಾಂತರಿಸಿದ ಮಾದರಿಯಲ್ಲಿಯೇ ರಾಮತೀರ್ಥ ನಗರವನ್ನು ಪಾಲಿಕೆಗೆ ಹಸ್ತಾಂತರಿಸುವಂತೆ ಬಿಜೆಪಿ ಸದಸ್ಯ ಹನುಮಂತ ಕೊಂಗಾಲಿ ಒತ್ತಾಯಿಸಿದರು. ರಾಮತೀರ್ಥ ನಗರವನ್ನು ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಮೇಯರ್ ಠರಾವ್ ಪಾಸ್ ಮಾಡಿದರು.
ಶ್ರೀನಗರದಲ್ಲಿ ಅನುಭವ ಮಂಟಪದ ಬಳಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಕೈಬಿಟ್ಟು, ಅಲ್ಲಿ ಉದ್ಯಾನ ನಿರ್ಮಿಸುವುದು, ಪಾಲಿಕೆ ವ್ಯಾಪ್ತಿಯಲ್ಲಿ ಡಾಡಾ ಎಂಟ್ರಿ ಮಾಡುವ 40 ಜನ ಹೊರ ಗುತ್ತಿಗೆದಾರರನ್ನು ನೇಮಕ ಮಾಡುವುದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಮಿತಿಗಳಿಗೆ ಪಾಲಿಕೆ ನಾಮನಿರ್ದೇಶಿತ ಸದಸ್ಯರ ನೇಮಕ, ಕುಡಿಯುವ ನೀರಿನ ಬವಣೆ ನೀಗಿಸುವುದು ಮೊದಲಾದ ವಿಷಯಗಳ ಕುರಿತಾಗಿ ಚರ್ಚಿಸಿ, ಠರಾವು ಅನುಮೋದಿಸಲಾಗಿದೆ.
ವಿರೋಧ ಪಕ್ಷದ ನಾಯಕನ ಆಯ್ಕೆ: ವಿಪಕ್ಷ ನಾಯಕನಾಗಿ ಕಾಂಗ್ರೆಸ್ ಸದಸ್ಯ ಮುಜಮ್ಮಿಲ್ ಡೋಣಿ ಅವರನ್ನು ಆಯ್ಕೆ ಮಾಡಲಾಯಿತು. ಮೇಯರ್ ಶೋಭಾ ಸೋಮನಾಚೆ ವಿರೋಧ ಪಕ್ಷದ ನಾಯಕನ ಘೋಷಿಸಿದರು. ಸಭೆಯಲ್ಲಿ ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ಪಾಲಿಕೆ ಸದಸ್ಯರು ಹಾಗು ಅಧಿಕಾರಿಗಳು ಇದ್ದರು.
ಇದನ್ನೂ ಓದಿ: G.Parameshwar: ಸಮುದಾಯದ ಬಗ್ಗೆ ಕೀಳು ಮಾತು ಸಹಿಸಲ್ಲ, ಕಾನೂನು ಪ್ರಕಾರ ಕ್ರಮ- ಸಚಿವ ಜಿ.ಪರಮೇಶ್ವರ್