ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಹೀಗಾಗಿ ಸರಳ ರೀತಿಯಲ್ಲಿ ರಾಜ್ಯೋತ್ಸವ ಆಚರಿಸುತ್ತೇವೆ. ಈ ಆಚರಣೆಗೆ ಯಾವ ನಿರ್ಬಂಧವನ್ನೂ ಹೇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಹೇಳಿದ್ರು.
ಜಿಲ್ಲಾಧಿಕಾರಿ ಸಭಾಗಂಣದಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹೋಳಿಗೆ ಊಟ, ಹೆಲಿಪ್ಯಾಡ್ ನ್ನು ಬಳಸುವುದು ಬೇಡ, ಯಾವುದೇ ಅಡೆತಡೆಯಾಗದಂತೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಸಭೆಯಲ್ಲಿ ಕನ್ನಡಪರ ಹೋರಾಟಗಾರರು ಮಾತನಾಡಿ, ಕನ್ನಡ ಅನುಷ್ಠಾನದ ಬಗ್ಗೆ 25 ಚರ್ಚೆಗಳಾಗಿವೆ. ಇವು ಸಭೆಗೆ ಮಾತ್ರ ಸೀಮಿತವಾಗಿದ್ದು, ಈವರೆಗೆ ಯಾವುದೂ ಅನುಷ್ಠಾನವಾಗಿಲ್ಲ. ಪೊಲೀಸರ ಕಚೇರಿ ನಾಮಫಲಕವನ್ನು ಇಂಗ್ಲಿಷ್ನಲ್ಲಿ ಹಾಕಲಾಗಿದೆ. ಈ ಕುರಿತು ಕಳೆದ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶೇ. 60% ರಷ್ಟು ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಬೇಕು ಎಂದು ನೋಟಿಸ್ ಕೊಟ್ಟರೂ ಸಾಧ್ಯವಾಗುತ್ತಿಲ್ಲ. ಕನ್ನಡಪರ ಹೋರಾಟಗಾರರಿಗೆ ಪೊಲೀಸರು ಬೆಂಬಲ ನೀಡುತ್ತಿಲ್ಲ. ಅಲ್ಲದೆ ಮಳಿಗೆಗಳನ್ನು ಬಾಡಿಗೆ ನೀಡುವಾಗ ಅಂಗಡಿಗಳಿಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಬಳಸುವಂತೆ ಮಾಲೀಕರಿಗೆ ತಿಳಿಸಬೇಕೆಂದು ಕನ್ನಡಪರ ಹೋರಾಟಗಾರರು ಹೇಳಿದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಸೀಮಾ ಲಾಟ್ಕರ್, ಕನ್ನಡ ಬಗ್ಗೆ ಸಮಸ್ಯೆ ಉಂಟಾದರೆ ಅಜೆಂಡಾ ತಯಾರಿಸಿಕೊಳ್ಳಿ. ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ. ರಾಜ್ಯೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಒದಗಿಸುತ್ತೇವೆ ಎಂದರು.