ಬೆಳಗಾವಿ: ಗೋಕಾಕಿನಲ್ಲಿ ಜಾರಕಿಹೊಳಿ ಸಾಮ್ರಾಜ್ಯ ನಿರ್ಮಾಣಕ್ಕೆ ಜಾರಕಿಹೊಳಿ ಸಹೋದರರ ಶ್ರಮದ ಜತೆಗೆ ಕಾರ್ಯಕರ್ತರ ಶ್ರಮವೂ ಇದೆ. ನಮಗೆ ಐವರೂ ಜಾರಕಿಹೊಳಿ ಸಹೋದರರು ಬೇಕು. ಇಬ್ಬರು ಜಾರಕಿಹೊಳಿ ಸಹೋದರರು ಕಣದಲ್ಲಿರುವುದರಿಂದ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದೇವೆ ಎಂದು ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದ್ದಾರೆ.
ಗೋಕಾಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಹೋದರರ ಸ್ಪರ್ಧೆಯಿಂದ ಮತದಾರರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಗೊಂದಲಕ್ಕೀಡಾಗಿದ್ದಾರೆ. ಐವರು ಸಹೋದರರ ಪೈಕಿ ಮೂವರು ಬಿಜೆಪಿ, ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಯಾರ ಪರ ಗುರುತಿಸಕೊಳ್ಳಬೇಕು ಎಂಬ ಗೊಂದಲದಲ್ಲಿ ಬೆಂಬಲಿಗರಿದ್ದೇವೆ ಎಂದರು.
2008ರ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಕಣದಲ್ಲಿದ್ದರೂ ಯಾವುದೇ ಭಿನ್ನಮತ ಆಗಿರಲಿಲ್ಲ. ನಮಗೆ ಪಕ್ಷಕ್ಕಿಂತ ಜಾರಕಿಹೊಳಿ ಸಹೋದರರು ಮುಖ್ಯ. ಸದ್ಯ ಪಕ್ಷ ಬದಲಾವಣೆಯಿಂದ ನಮಗೆ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲ ಉಂಟಾಗಿದೆ ಎಂದರು.
ಗೋಕಾಕ್‌ನಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ಸಂಘಟನೆ ಹೆಚ್ಚು ಪ್ರಭಾವ ಹೊಂದಿದೆ. ಇಲ್ಲಿ ಜಾರಕಿಹೊಳಿ ಪರ ಗುಂಪು, ಜಾರಕಿಹೊಳಿ ವಿರೋಧಿ ಗುಂಪು ಇವೆ. ರಾಜ್ಯದಲ್ಲಿ ಪಕ್ಷಗಳ ಆಧಾರದ ಮೇಲೆ ನಿರ್ಣಯ ಆಗುತ್ತವೆ. ಆದರೆ ಗೋಕಾಕ್ ಕ್ಷೇತ್ರದಲ್ಲಿ ಗುಂಪುಗಳ ಆಧಾರದ ಮೇಲೆ ಚುನಾವಣೆ ಆಗುತ್ತದೆ ಎಂದು ತಿಳಿಸಿದ್ರು.