ಬೆಳಗಾವಿ: ನೆರೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಭಾಗದ ರೈತರು ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದು, ರೈತರ ಜತೆಗೆ ಡಿಸಿ ಡಾ. ಎಸ್.ಬಿ. ಬೊಮ್ಮನಹಳ್ಳಿ ನಡೆಸಿದ ಸಂಧಾನಸಭೆ ವಿಫಲವಾಗಿದೆ.
ಬೆಳಗಾವಿ ಡಿಸಿ ಕಚೇರಿಯಲ್ಲಿ ಡಿಸಿ ಬೊಮ್ಮನಹಳ್ಳಿ ಅವರು 10 ಜನ ರೈತ ಮುಖಂಡರ ಜತೆಗೆ 2 ಗಂಟೆ ಸಭೆ ನಡೆಸಿದರೂ ಸಭೆ ಫಲಕೊಡದ ಕಾರಣ ರೈತರು ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ತಕ್ಷಣವೇ ಪ್ರತಿಭಟನಾ ಸ್ಥಳಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ ಇಲ್ಲವೇ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬರಬೇಕು. ನಮ್ಮ ಅಹವಾಲು ಸ್ವೀಕರಿಸಿದ ಬಳಿಕವೇ ಪ್ರತಿಭಟನೆ ಹಿಂದೆ ಪಡೆಯಲಾಗುವುದು. ಇಲ್ಲವಾದರೆ ಧರಣಿ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗ ಪ್ರವಾಹಕ್ಕೆ ತತ್ತರಿಸಿದೆ. ಜನರ ಬದುಕು ಬೀದಿಗೆ ಬಂದಿದ್ದು, ರೈತರುಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಆದರೂ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಸರ್ಕಾರದ ಸಚಿವರೊಬ್ಬರು ಇಲ್ಲಿ ಬರಬೇಕು ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದಿದ್ದಾರೆ.
ಸಂಧಾನ ಸಭೆ ವಿಫಲವಾದ ಕಾರಣ ಡಿಸಿ ಕಚೇರಿ ಎದುರು ಊಟ ಸಿದ್ಧಪಡಿಸಿಕೊಂಡ ರೈತರು ಸಾಮೂಹಿಕವಾಗಿ ಮಧ್ಯಾಹ್ನದ ಭೋಜನ ಸವಿದಿದ್ದಾರೆ.