ಬೆಳಗಾವಿ: ಹಣ ಮತ್ತು ಬಸ್ ಪಾಸ್ ಕಳೆದುಕೊಂಡು ಸ್ವಂತ ಊರಿಗೆ ತೆರಳಲು ಪರದಾಡುತ್ತಿದ್ದ ಅಂಧ ವ್ಯಕ್ತಿಯೊಬ್ಬರಿಗೆ ಬೆಳಗಾವಿ ಡಿಸಿಪಿ ಡಾ.ವಿಕ್ರಮ ಆಮಟೆ ಅವರು ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಮಡಿಕೇರಿ ಜಿಲ್ಲೆಯ ಕುಶಾಲನಗರದ ನಿವಾಸಿ ಕಲ್ಲಪ್ಪ ಬೂದಿಹಾಳ ಕೈಯಲ್ಲಿದ್ದ ಹಣ, ಬಸ್ ಪಾಸ್ ಮತ್ತು ಗುರುತಿನ ಚೀಟಿ ಕಳೆದುಕೊಂಡು ಪರದಾಡುತ್ತಿದ್ದರು. ಇವರು ಸಹಾಯಕ್ಕಾಗಿ ಡಿಸಿ ಕಚೇರಿಗೆ ಆಗಮಿಸಿದ್ದರು. ಅದೇ ವೇಳೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ಡಿಸಿಪಿಯವರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಹಾಯ ಮಾಡುವಂತೆ ಕೋರಿಕೊಂಡರು.
ಈ ವೇಳೆ ಸಹಾಯಕ್ಕೆ ಧಾವಿಸಿದ ಡಿಸಿಪಿ, ಕಲ್ಲಪ್ಪನಿಗೆ ಬಸ್ಸಿನ ಟಿಕೆಟ್ ಖರ್ಚು ಮತ್ತು ಆಹಾರ ವ್ಯವಸ್ಥೆ ಮಾಡಿದರು. ಬಳಿಕ ವಿಕ್ರಂ ಅವರ ಸೂಚನೆ ಮೇರೆಗೆ ಕಲ್ಲಪ್ಪನ್ನನು ಪೊಲೀಸ್ ಸಿಬ್ಬಂದಿ ಬಸ್ ನಿಲ್ದಾಣದವರೆಗೆ ಬಿಟ್ಟು ಬಂದರು.