ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ನಾಪತ್ತೆ ಆಗಿದ್ದಾರೆ.
ಉಣ್ಣೆ ಉತ್ಪಾದಕರ ಸಹಕಾರಿ ಸಂಘದಿಂದ ನಾಮಪತ್ರ ಸಲ್ಲಿಸಿದ್ದ ಕೃಷ್ಣಾ ಅನಗೋಳ್ಕರ್ ನಾಪತ್ತೆ ಆಗಿದ್ದಾರೆ. ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದ ಕಮಲ ನಾಯಕರಿಗೆ ಕೃಷ್ಣಾ ಅನಗೋಳ್ಕರ್ ನಡೆ ತಲೆನೋವಾಗಿದೆ. ಎರಡು ದಿನಗಳ ಹಿಂದೆ ಒಬ್ಬಂಟಿಗರಾಗಿ ಬಂದು ನಾಮಪತ್ರ ಸಲ್ಲಿಸಿ ಹೋಗಿದ್ದ ಕೃಷ್ಣಾ ಅನಗೋಳ್ಕರ್ ಇದೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಗ್ರಾಮದ ಕೃಷ್ಣಾ ಅನಗೋಳ್ಕರ್ ಸಾಂಬ್ರಾ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯರೂ ಆಗಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ, ರಮೇಶ ಕತ್ತಿ ಕೃಷ್ಣಾ ಅನಗೋಳ್ಕರ್ ಸಂಪರ್ಕಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ ಹಾಗೂ ಮನೆಗೂ ಆಪ್ತರನ್ನು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕೃಷ್ಣಾ ಅನಗೋಳ್ಕರ್ ಕಮಲ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ.
ಉಣ್ಣೆ ಸಹಕಾರ ಉತ್ಪಾದಕರ ಸಂಘದಿಂದ ಮತ್ತೋರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಗಜಾನನ ಕೊಳ್ಳಿ ಎಂಬುವವರು ನಾಮಪತ್ರ ಸಲ್ಲಿಸಿದ್ದು, ಇವರು ಮಾಜಿ ಸಚಿವ ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಅತ್ಯಾಪ್ತರು. ಗಜಾನನ ಕೊಳ್ಳಿ ಅವರನ್ನು ಅವಿರೋಧ ಆಯ್ಕೆ ಮಾಡಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದು, ಮತ್ತೋರ್ವ ಅಭ್ಯರ್ಥಿ ಅನಗೋಳ್ಕರ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ಕಾರಣ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅವಿರೋಧ ಆಯ್ಕೆ ಅನುಮಾನ ಎನ್ನಲಾಗುತ್ತಿದೆ.