ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ 10 ಜನ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇಂದೂ ಸಹ ಬೀಮ್ಸ್‌ನಲ್ಲಿ ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸದ್ಯ 87 ಜನರಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ ಆಗಿದೆ. ಆ ಪೈಕಿ 49 ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ 38 ಜನರು ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಬ್ಲ್ಯಾಕ್ ಫಂಗಸ್ ಇದ್ದವರಿಗೆ ಸಮರ್ಪಕ ಔಷಧ ಪೂರೈಕೆ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚು ಔಷಧ ಪೂರೈಕೆಯಾಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಮಕ್ಕಳಿಗೆ ಬ್ಲ್ಯಾಕ್, ವೈಟ್ ಫಂಗಸ್ ಆಗಿಲ್ಲ. ಆದರೆ, ನಾಲ್ವರು ಕೋವಿಡ್ ಪಾಸಿಟಿವ್ ಮಕ್ಕಳು ಬಿಮ್ಸ್‌ಗೆ ದಾಖಲಾಗಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯ 800 ಹಳ್ಳಿಗಳಲ್ಲಿ ರ‍್ಯಾಪಿಡ್ ಟೆಸ್ಟ್ ಮಾಡಲಾಗಿದೆ. ಅದಕ್ಕಾಗಿ 135 ವೈದ್ಯಕೀಯ ತಂಡ ಪ್ರತಿ ಹಳ್ಳಿಗೂ ಭೇಟಿ ನೀಡಿ ರ‍್ಯಾಪಿಡ್ ಟೆಸ್ಟ್ ನಡೆಸುತ್ತಿದೆ. 1200 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಆರೈಕೆ ಪಡೆದು ಬಿಡುಗಡೆ ಆಗಿದ್ದು, 600 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದಾರೆ. ಜನರು ಕೋವಿಡ್ ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್‌ಗೆ ಬಂದು ದಾಖಲಾಗಬೇಕು. ಇದರಿಂದ ನಿಮ್ಮ ಮನೆಯವರು ಸೇರಿ ಇತರರು ಸುರಕ್ಷಿತರಾಗಿರುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ 300 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದರು.
ಯಾರು ಕೆಲಸ ಮಾಡಲ್ವೋ ಅವರ ವಿರುದ್ಧ ಕ್ರಮ:
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಏಳು ಶುಶ್ರೂಷಾಧಿಕಾರಿಗಳನ್ನು ಬಿಡುಗಡೆಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಮ್ಸ್ನಲ್ಲಿ ಯಾರೂ ಸರಿ ಕೆಲಸ ಮಾಡಲ್ವೋ ಅವರು ನಮಗೆ ಬೇಡ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಉಪಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಹೀಗಾಗಿ ಬಿಮ್ಸ್ ಆಸ್ಪತ್ರೆ ಸುಧಾರಣೆಗೆ ಮುಂದಾಗಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಕೋವಿಡ್ ಪರಿಸ್ಥಿತಿಯಲ್ಲೂ ಜನರಿಗೆ ಉತ್ತಮ ಸೇವೆ ನೀಡುವ ಸಿಬ್ಬಂದಿಗಳು ನಮಗೆ ಬೇಕು ಎಂದರು.
ಮೇಲಧಿಕಾರಿಗಳ ತಪ್ಪಿಗೆ ನಮಗೆ ಶಿಕ್ಷೆ ನೀಡಿದ್ದಾರೆ ಎಂಬ ನರ್ಸ್‌ಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.