ಬೆಳಗಾವಿ: ಜಿಲ್ಲೆಯಲ್ಲಿ ಇಂದೂ ಕೂಡ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ವ್ಯಕ್ತಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇಲ್ಲಿನ ಮಹಾಂತೇಶ್ ನಗರದ ವ್ಯಕ್ತಿಯೊಬ್ಬನನ್ನು ನಗರದ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಬೆಡ್ ಕೊಡಿಸಲು ಸತತ ನಾಲ್ಕು ಗಂಟೆಗಳ ಕಾಲ ಆತನ ಕುಟುಂಬಸ್ಥರು ಹರಸಾಹಸಪಟ್ಟಿದ್ದರು. ಆದ್ರೆ, ಕೊನೆಗೂ ಅವರ ಪ್ರಯತ್ನ ಸಫಲವಾಗದೇ ಸಲೀಮ್ ಡೋಣಿ (50) ಮೃತಪಟ್ಟಿದ್ದಾರೆ.
ಬೆಳಗ್ಗೆ ಒಂದಾದರೂ ವೆಂಟಿಲೇಟರ್ ಬೆಡ್ ಕೊಡಿಸಿ ಎಂದು ಮೃತನ ಮಗಳು, ಹೆಂಡತಿ ಗೋಗರಿಯುತ್ತಿದ್ದ ದೃಶ್ಯ ಮಮ್ಮಲ ಮರಗುವಂತೆ ಮಾಡಿತ್ತು. ಆದ್ರೆ, ನಾಲ್ಕು ಗಂಟೆಗಳ ಕಾಲ ಕಾದರೂ ಮೃತ ರೋಗಿಗೆ ವೆಂಟಿಲೇಟರ್ ಬೆಡ್ ಸಿಗದೇ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಇಂದು ಕೂಡ ಬಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್, ವೆಂಟಿಲೇಟರ್ ಇಲ್ಲದೇ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಆರೋಪ ಕೇಳಿಬಂದಿದೆ. ಬಿಮ್ಸ್ ಆಡಳಿತ ಮಂಡಳಿ ಇರೋ ಸತ್ಯವನ್ನು ಸ್ಪಷ್ಟಪಡಿಸಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- "ಒಂದಾದರೂ ವೆಂಟಿಲೇಟರ್ ಬೆಡ್ ಕೊಡಿಸಿ": ಬಿಮ್ಸ್ ಮುಂದೆ ರೋಗಿಯ ಸಂಬಂಧಿಕರ ಅಳಲು
ಇಂದೂ ಸಹ 11 ಜನರ ಅಂತ್ಯಕ್ರಿಯೆ:
ಜಿಲ್ಲಾದ್ಯಂತ ಆಕ್ಸಿಜನ್ ಬೆಡ್, ವೆಂಟಿಲೇಟರ್ ಬೆಡ್‌ಗಳ ಕೊರತೆ ಹಿನ್ನೆಲೆ ಸದಾಶಿವ ನಗರದ ಸ್ಮಶಾನ ಭೀಕರತೆಗೆ ಸಾಕ್ಷಿಯಾಗ್ತಿದ್ದು, ಇಂದೂ ಸಹ 11 ಜನರ ಅಂತ್ಯಕ್ರಿಯೆ ನಡೆದಿದೆ. ಆ ಪೈಕಿ ಕೊರೊನಾದಿಂದ ಮೃತಪಟ್ಟ ನಾಲ್ವರು ಹಾಗೂ ನಾನ್ ಕೋವಿಡ್ 7 ಒಟ್ಟು 11 ಜನರ ಅಂತ್ಯಕ್ರಿಯೆ ನೇರವೇರಿಸಲಾಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಉಸಿರಾಟ ಸಮಸ್ಯೆಯಿಂದಲೇ ಹಲವರು ಮೃತಪಡುತ್ತಿದ್ದರೆ, ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೆಡ್ ಸಿಗದೇ ಮತ್ತಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ರ‌್ಯಾಪಿಡ್, ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ಕೋವಿಡ್ ದೃಢವಾಗಿ ಮೃತಪಟ್ಟರೇ ಮಾತ್ರ ಕೋವಿಡ್ ಸಾವು ಅಂತಾ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಎಚ್ಆರ್ ಸಿಟಿ(HRCT) ಸ್ಕ್ಯಾನ್ ಮಾಡಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೇ ಅದನ್ನ ನಾನ್ ಕೋವಿಡ್ ಡೆತ್ ಅಂತಾ ಪರಿಗಣಿಸಲಾಗುತ್ತಿದೆ.
ರೋಗದ ಗುಣಲಕ್ಷಣ ಇದ್ದರೂ ಟೆಸ್ಟ್ ಮಾಡಿಸದೇ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಪರಿಣಾಮ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಇದರಿಂದಲೇ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.