ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು.20ರಿಂದ ಆರಂಭವಾಗಲಿರುವ ಶ್ರಾವಣ ಮಾಸದಲ್ಲಿ ಪ್ರತಿನಿತ್ಯದ ಪೂಜೆಗಳ ಹೊರತಾಗಿ ಜನರು ಗುಂಪುಗೂಡುವಂತಹ ಯಾವುದೇ ವಿಶೇಷ ಕಾರ್ಯಕ್ರಮ ಹಾಗೂ ಸಮಾರಂಭಗಳನ್ನು ಪಾಲಿಕೆಯ ಅನುಮತಿ ಇಲ್ಲದೇ ನಡೆಸುವಂತಿಲ್ಲ ಎಂದು ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ.
ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಸ್ಥಾನ/ಧಾರ್ಮಿಕ ಕೇಂದ್ರದಲ್ಲಿ ಸರ್ಕಾರದ ಮಾರ್ಗಸೂಚಿಗಳಂತೆ ವ್ಯಕ್ತಿಗತ ಅಂತರ ಕಾಯ್ದುಕೊಂಡು ಸದ್ಯ ಮಾಡುತ್ತಿರುವ ಪ್ರತಿನಿತ್ಯದ ಪೂಜೆಗಳ ಹೊರತಾಗಿ ಜನರು ಗುಂಪುಗೂಡುವಂತಹ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಹಾಗೂ ಸಮಾರಂಭಗಳನ್ನು ಪಾಲಿಕೆಯ ಅನುಮತಿ ಇಲ್ಲದೇ ನಡೆಸುವಂತಿಲ್ಲ. ಒಂದು ವೇಳೆ ಅನುಮತಿ ಇಲ್ಲದೇ ಪೂಜೆ/ಸಮಾರಂಭ ಅಥವಾ ಯಾವುದೇ ಕಾರ್ಯಕ್ರಮ ನಡೆಸಿದಲ್ಲಿ ಅದಕ್ಕೆ ಸಂಬಂಧಪಟ್ಟ ದೇವಸ್ಥಾನ ಟ್ರಸ್ಟಿಗಳು ಹಾಗೂ ಮಂಗಲ ಕಾರ್ಯಾಲಯಗಳ ಮಾಲಿಕರೇ ಜವಾಬ್ದಾರರಾಗಿರುತ್ತಾರೆ ಎಂದಿದ್ದಾರೆ.
ಕೋವಿಡ್-19 ನಿಯಮಗಳಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಕರ್ನಾಟಕ ಎಪಿಡೆಮಿಕ್ ಡಿಸೀಸಸ್, ಕೋವಿಡ್-19 ರೆಗ್ಯೂಲೇಶನ್ 2020ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.