ಬೆಳಗಾವಿ: ಸಂಪುಟ ಪುನಾರಚನೆ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯ ಸಚಿವಾಕಾಂಕ್ಷಿಗಳು ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ. ಆರ್‌ಎಸ್ಎಸ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಸಂಪುಟ ಸೇರುವ ಉತ್ಸಾಹದಲ್ಲಿದ್ದಾರೆ. ಮತ್ತೊಂದೆಡೆ ಸಚಿವ ಸ್ಥಾನ ಉಳಿಸಿಕೊಳ್ಳಲು ಉಮೇಶ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಶತಪ್ರಯತ್ನ ನಡೆಸಿದ್ದಾರೆ.
ಗುರುವಾರ ಬೆಳಗಾವಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಸಚಿವಾಕಾಂಕ್ಷಿಗಳು ಭೇಟಿಯಾಗಿ ಲಾಬಿ ಮಾಡಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ ಈವರೆಗೂ ಸಚಿವರಾಗಿಲ್ಲ. ಪಕ್ಷ ತೊರೆದು ಬಿಜೆಪಿ ಸೇರಿದ್ದ ಉಳಿದೆಲ್ಲ 17 ಶಾಸಕರ ಪೈಕಿ 15 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗಾಗಿ ಈ ಸಲವಾದರೂ ಸಚಿವ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಕು ಎಂದು ಮಹೇಶ ಕುಮಟಳ್ಳಿ ಪಟ್ಟು ಹಿಡಿದಿದ್ದಾರೆ.
ಮತ್ತೆ ಮಂತ್ರಿಗಿರಿಗೆ ಕಸರತ್ತು: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಈ ಹಿಂದೆ ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದರು. ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ ರಾಜೀನಾಮೆ ನೀಡಿದರೆ, ನಾಯಕತ್ವ ಬದಲಾವಣೆ ನಂತರ ಆದ ಸಂಪುಟ ರಚನೆಯ ವೇಳೆ ಶ್ರೀಮಂತ ಪಾಟೀಲ ಹಾಗೂ ಡಿಸಿಎಂ ಆಗಿದ್ದ ಲಕ್ಷಣ ಸವದಿ ಅವರನ್ನು ಕೈಬಿಡಲಾಯಿತು.
ಇದೀಗ ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಆರ್‌ಎಸ್ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ ನಿರಂತರ ಸಂಪರ್ಕದಲ್ಲಿದ್ದಾರೆ. ಇತ್ತ, ಮರಾಠಾ ಕೋಟಾದಡಿ ಶ್ರೀಮಂತ ಪಾಟೀಲ ಮತ್ತೊಮ್ಮೆ ಮಂತ್ರಿಗಿರಿಗೆ ಕಸರತ್ತು ಆರಂಭಿಸಿದ್ದಾರೆ. ಲಕ್ಷ್ಮಣ ಸವದಿ ಕೂಡ ಮರಳಿ ಮಂತ್ರಿಗಿರಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಆಗ ಸವದಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಿರುವ ಕಾರಣ ಅವರ ಪ್ರಯತ್ನಕ್ಕೆ ಫಲ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಮಂತ್ರಿಗಿರಿ ಉಳಿಸಿಕೊಳ್ಳುವ ಯತ್ನ: ಬೆಳಗಾವಿ ಜಿಲ್ಲೆಯವರಾದ ಉಮೇಶ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಬೊಮ್ಮಾಯಿ ಸಂಪುಟದಲ್ಲಿದ್ದಾರೆ. ಸಂಪುಟ ಪುನಾರಚನೆ ವೇಳೆ ಜಿಲ್ಲೆಯ ಹೊಸಬರಿಗೆ ಅವಕಾಶ ಸಿಕ್ಕರೆ ಉಮೇಶ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ. ಆದರೆ, ಸಚಿವ ಉಮೇಶ ಕತ್ತಿ ಸಿಎಂ ಬೊಮ್ಮಾಯಿಯವರ ಅತ್ಯಾಪ್ತರಲ್ಲಿ ಗುರುತಿಸಿಕೊಂಡಿದ್ದಾರೆ.
ಇತ್ತ, ಶಶಿಕಲಾ ಜೊಲ್ಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಈ ಇಬ್ಬರು ಪುನಾರಚನೆ ವೇಳೆ ಸಂಪುಟದಿಂದ ಹೊರಬರುವ ಸಾಧ್ಯತೆ ಕಡಿಮೆ. ಆದರೆ ಹೊಸಬರಿಗೆ ಅವಕಾಶ ಕೊಟ್ಟರೆ ಹಳಬರನ್ನು ಕೈಬಿಡಬೇಕಾದ ಅನಿವಾರ್ಯತೆ ಬಿಜೆಪಿ ನಾಯಕರಿಗೆ ಎದುರಾಗಲಿದೆ ಎಂಬುದೂ ಸುಳ್ಳಲ್ಲ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಇಲ್ಲ: ದೆಹಲಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿ ಮಾತು