ಬೆಳಗಾವಿ: ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬಾರದು ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಅವರ ಜೊತೆಗೆ ಇರುವ ಸಚಿವ ಸಂಪುಟದ ಸಹೋದ್ಯೋಗಿಗಳೇ ಕುಂತಂತ್ರ ನಡೆಸುತ್ತಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬಾರದು ಎಂದರು.
ಓದಿ : ನಾಯಕತ್ವ ಬದಲಾವಣೆ ಗೊಂದಲದ ನಡುವೆ ಇಂದು ಸಚಿವ ಸಂಪುಟ ಸಭೆ: ಎಲ್ಲರ ಚಿತ್ತ ಸಿಎಂರತ್ತ
ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಎನಿಸಿಕೊಂಡಿರುವ ಯಡಿಯೂರಪ್ಪ ಹೋರಾಟ ಹಾದಿಯಲ್ಲಿ ಬಂದಿರುವವರು. ಈ - ಹಿಂದೆಯೂ ಕೆಲ ಜಾತಿವಾದಿಗಳು ಲಿಂಗಾಯತ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ನಿರ್ನಾಮ ಆಗುವುದು ಖಚಿತ. ರಾಜ್ಯದ ಲಿಂಗಾಯತರು, ಮಠಾಧೀಶರು ಸಿಎಂ ಪರ ಇದ್ದಾರೆ ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಇಡೀ ದೇಶವೇ ನಲುಗಿ ಹೋಗಿತ್ತು. ಅಂತಹ ಸಂದರ್ಭದಲ್ಲಿ ಕರ್ನಾಟಕಕ್ಕೆ ಯಾವುದೇ ರೀತಿಯ ಕೇಡು ಆಗದಂತೆ ಬಿಎಸ್‌ವೈ ನೋಡಿಕೊಂಡಿದ್ದರು. ಇಂತಹ ಮುಖ್ಯಮಂತ್ರಿಗಳು ನಮ್ಮ ನಾಡಿಗೆ ಅವಶ್ಯಕತೆ ಇದ್ದಾರೆ. ಹೀಗಾಗಿ, ಈ ಅವಧಿ ಮುಗಿಯುವವರೆಗೂ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು.